ಬಾಗಲಕೋಟೆ : ಚಿಕ್ಕಮಗಳೂರಿನ ಜನರು ಸಿಟಿ ರವಿ ಅವರನ್ನು, ಸಿ ಟಿ ರವಿ ಅಲ್ಲ ಲೂಟಿ ರವಿ ಎಂದು ಕರೆಯುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಿ ಟಿ ರವಿ ಬಗ್ಗೆ ವ್ಯಂಗ್ಯವಾಡಿದ್ದಾರೆ. ಜಮಖಂಡಿ ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚಿಕ್ಕಮಗಳೂರಿನಲ್ಲಿ ಜನರು ಹೀಗೆ ಕರೆಯುತ್ತಾರೆ. ನಾನು ಕರೆಯುತ್ತಿರುವುದಲ್ಲ ಎಂದು ಹೇಳಿದರು.
ಇನ್ನು ಅರ್ಕಾವತಿ, ಸೋಲಾರ್ ಹಗರಣದ ತನಿಖೆ ಬಹಿರಂಗ ಪಡಿಸುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಮ್ಮನ್ನು ಹೆದರಿಸುತ್ತೀರಾ.? ಬ್ಲಾಕ್ ಮೇಲ್ ಮಾಡ್ತಿರಾ?, ಇದಕ್ಕೆಲ್ಲ ನಾವು ಹೆದರುವ ಗಿರಾಕಿಗಳಲ್ಲ. 2006 ರಿಂದ ಈವರೆಗಿನ 16 ವರ್ಷದಲ್ಲಿ ಬಿಜೆಪಿ 11 ವರ್ಷ ಆಡಳಿತ ನಡೆಸಿದೆ. ನಾವು ಐದು ವರ್ಷ ಇದ್ದೆವು. ಸಿದ್ದರಾಮಯ್ಯ ಸರ್ಕಾರದ ಹಗರಣ ಎಂದು ಹೇಳುತ್ತಾರೆ. 2006 ರಿಂದ ಎಲ್ಲವನ್ನು ತನಿಖೆ ಮಾಡಿ ಎಂದು ಸಿದ್ದರಾಮಯ್ಯನವರು ಸರ್ಕಾರಕ್ಕೆ ಸವಾಲ್ ಹಾಕಿದರು. ಜೊತೆಗೆ ಇದರ ತನಿಖೆಗೆ ಪ್ರತ್ಯೇಕ ಆಯೋಗ ಮಾಡಲಿ. 2006 ರಿಂದ 2023 ರ ವರೆಗೂ ಯಾರ ಕಾಲದಲ್ಲಿ ಏನಾಗಿದೆಯೋ ಎಲ್ಲವನ್ನೂ ತನಿಖೆ ಮಾಡಲಿ ಎಂದು ಹೇಳಿದರು.
ಹಾಡಿನ ಮೂಲಕ ಸಚಿವ ಸುಧಾಕರ್ ವ್ಯಂಗ್ಯ ಮಾಡಿದ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅದು ಬಿಜೆಪಿ ಅವರಿಗೂ ಅನ್ವಯಿಸುತ್ತದೆ. ಯಡಿಯೂರಪ್ಪ ಕಾಂಗ್ರೆಸ್ ಬರಲ್ಲ ಎನ್ನುತ್ತಾರೆ. 150 ಸೀಟ್ ಗೆಲ್ಲುತ್ತೇವೆ ಎಂದು ಹೇಳುತ್ತಾರೆ. ಇದು ಅವರಿಗೂ ಅನ್ವಯಿಸುವುದಿಲ್ವ ಎಂದು ಪ್ರಶ್ನಿಸಿದರು. ನಾನು ಮುಖ್ಯಮಂತ್ರಿ ಆಗುತ್ತೇನೆ ಎಂದು ಬಿಜೆಪಿಯವರಿಗೆ ಭಯ ಶುರುವಾಗಿದೆ. ಹೀಗಾಗಿ ಬಿಜೆಪಿಯವರೆಲ್ಲಾ ನನ್ನನ್ನೇ ಗುರಿಯಾಗಿಸಿಕೊಂಡು ಟೀಕೆ ಮಾಡುತ್ತಾರೆ ಎಂದರು.