ಬಾಗಲಕೋಟೆ: ಬಿಜೆಪಿ ಎಂದರೆ ಸುಳ್ಳಿನ ಫ್ಯಾಕ್ಟರಿ ಎಂದು ವಿಪಕ್ಷನಾಯಕ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮಾಜಿ ಸಚಿವ ಆರ್ ಬಿ ತಿಮ್ಮಾಪೂರ ಅವರ ಹುಟ್ಟುಹಬ್ಬದ ನಿಮಿತ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮ ಭಾಗವಹಿಸಿದ್ದ ಸಿದ್ದರಾಮಯ್ಯ ರಾಜ್ಯ ಸರ್ಕಾರದ ತೀವ್ರ ವಾಗ್ದಾಳಿ ನಡೆಸಿದರು.
ನಮ್ಮ ಕಾಂಗ್ರೆಸ್ ಪಕ್ಷ ತಂದಿರುವ ಯೋಜನೆಗಳನ್ನು ರಾಜ್ಯ ಸರ್ಕಾರ ಜಾರಿಗೆ ತಂದಿಲ್ಲ. ಶಾದಿ ಭಾಗ್ಯ, ಇಂದಿರಾ ಕ್ಯಾಂಟೀನ್ ಸೇರಿದಂತೆ ವಿವಿಧ ಯೋಜನೆಗಳನ್ನು ನಿಲ್ಲಿಸಿದ್ದಾರೆ. ಬಿಜೆಪಿ ಅಂದರೆ ಸುಳ್ಳು ಹೇಳುವ ಪಕ್ಷ, ಸುಳ್ಳಿನ ಫ್ಯಾಕ್ಟರಿಯಾಗಿದೆ. ನರೇಂದ್ರ ಮೋದಿಯವರು ಅಚ್ಚೇ ದಿನ್ ಆಯೇಗಾ ಎಂದು ಹೇಳಿದ್ದರು. ಅಚ್ಚೇ ದಿನ ಬಂತಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಸಿಎಂ ಬೊಮ್ಮಾಯಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಯಾರೇ ಎಂಜಲು ತಿಂದರೂ ಅದು ಎಂಜಲೇ, ಯಾರೇ ಲಂಚ ತಿಂದರೂ ಅದು ಲಂಚವೇ, ಯಾವ ಜಾತಿಯಾದರೂ ಏನು ಸೂಕ್ತ ತನಿಖೆ ಮಾಡಿಸಿ, ಸುಳ್ಳು ಆರೋಪ ಮಾಡಬೇಡಿ ಎಂದು ಟೀಕಿಸಿದರು. ಬೊಮ್ಮಾಯಿಯವರು ಧಮ್ ಇದ್ದರೆ, ತಾಕತ್ ಇದ್ದರೆ ಎಂದು ಹೇಳುತ್ತಾರೆ. ನನ್ನನ್ನು ಗುರಿಯಾಗಿಸಿ ಮಾತನಾಡುತ್ತಾರೆ. ಬಿಜೆಪಿಯವರಿಗೆ ನನ್ನನ್ನು ಕಂಡರೇ ಭಯ, ಅದಕ್ಕೆ ಎಲ್ಲರೂ ರಣಹದ್ದು ತರ ನನ್ನ ಮೇಲೆ ಮುಗಿ ಬೀಳುತ್ತಾರೆ. ಆದರೆ ಇದಕ್ಕೆಲ್ಲ ಹೆದರುವ ಮಗ ನಾನಲ್ಲ ಎಂದು ಸಿದ್ದರಾಮಯ್ಯ ಟಾಂಗ್ ನೀಡಿದರು.