ಬಾಗಲಕೋಟೆ:ಕೋಮುವಾದ ಕೆರಳಿಸಿ, ಜಾತಿ ಸಂಘರ್ಷ ಮಾಡುವಂತಹ ಸಂಘಟನೆ ನಿಷೇಧ ಮಾಡುವ ಬಗ್ಗೆ ಪ್ರಣಾಳಿಕೆಯಲ್ಲಿ ಸೇರಿಸಲಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದರು. ಬಾಗಲಕೋಟೆಯ ಪ್ರಚಾರ ಸಭೆಗೆ ಆಗಮಿಸುವುದಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೋಮುವಾದ ಕೆರಳಿಸಿ, ಜಾತಿ ವಿಷ ಬೀಜ ಬಿತ್ತುವಂತಹ ಸಂಘಟನೆಗಳನ್ನು ನಿಷೇಧ ಮಾಡುತ್ತೇವೆ ಎಂದು ಹೇಳಿದರು.
ವರುಣದಲ್ಲಿ ಸೋಮಣ್ಣ ಗೆದ್ದರೆ ವರುಣವನ್ನು ಸಮಗ್ರವಾಗಿ ಅಭಿವೃದ್ಧಿ ಮಾಡುತ್ತೇವೆ ಎಂದು ಅಮಿತ್ ಶಾ ಹೇಳಿಕೆಗೆ ಪ್ರತಿಕ್ರಿಯಿಸಿ, ಮೊದಲು ಇಲ್ಲಿಯವರೆಗೆ ಏನು ಮಾಡಿದ್ದೀವಿ ಎಂದು ಹೇಳಬೇಕಲ್ವಾ, ವಸತಿ ಸಚಿವರಾಗಿ ಸೋಮಣ್ಣ ವರುಣದಲ್ಲಿ ಮನೆ ಕೊಟ್ಟಿದ್ದಾರೆ, ಏನು ಅಭಿವೃದ್ಧಿ ಮಾಡಿದ್ದಾರೆ? ಏನು ಮಾಡದೆ ನಾನು ಮುಂದೆ ಅಭಿವೃದ್ಧಿ ಮಾಡುತ್ತೇನೆಂದರೆ ಜನ ನಂಬುತ್ತಾರಾ. ಚುನಾವಣೆಗೋಸ್ಕರ ಸುಳ್ಳು ಹೇಳುತ್ತಾರೆ ಎಂದು ಟೀಕಿಸಿದರು.
ಇಂದು ಬಿಡುಗಡೆಯಾದ ಕಾಂಗ್ರೆಸ್ ಪ್ರಣಾಳಿಕೆ ಬಿಜೆಪಿಯ ಕಾಪಿ ಎಂದು ಸಿಎಂ ಬೊಮ್ಮಾಯಿ ಹೇಳಿಕೆಗೆ ಪ್ರತಿಕ್ರಿಯಿಸಿ, ಬಿಜೆಪಿ 2018ರಲ್ಲಿ ಘೋಷಣೆ ಮಾಡಿದ್ದ ಎಷ್ಟು ಯೋಜನೆಗಳನ್ನು ಜಾರಿ ಮಾಡಿದೆ ಎಂದು ಸಿಎಂ ಬೊಮ್ಮಾಯಿಗೆ ಕೇಳಿ, ಸಾಲ ಮನ್ನಾ ಮಾಡಿದ್ರ, ಮನೆ ಕೊಟ್ಟರಾ, 10 ಗಂಟೆ ಕರೆಂಟ್ ಕೊಡ್ತಿವಿ ಎಂದು ಹೇಳಿದ್ದರು ಕೊಟ್ರ. ರೈತರಿಗೆ ಏನು ಮಾಡಿದ್ದಾರೆ?. ಪ್ರಧಾನಮಂತ್ರಿ ಮೋದಿ ಏನು ಮಾಡಿದ್ರು 15 ಲಕ್ಷ ಕೊಡ್ತಿವಿ ಎಂದಿದ್ದರು ಕೊಟ್ರಾ, ಅಚ್ಛೆ ದಿನ ಅಂದರೂ, ಅಚ್ಛೆ ದಿನ ಬಂದಿದಿಯಾ ಎಂದು ಪ್ರಶ್ನೆ ಮಾಡಿದರು. ರಾಜ್ಯ ಬಿಜೆಪಿಯವರಿಗೆ ಇವರು ಮುಖ ನೋಡಿದರೆ ಯಾರು ವೋಟ್ ಹಾಕಲ್ಲ ಎಂದು ಗೊತ್ತಾಗಿದೆ ಅದಕ್ಕೆ ಅಮಿತ್ ಶಾ, ನರೇಂದ್ರ ಮೋದಿ, ನಡ್ಡಾ ಅವರು ಕರೆಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ಗೆ ಸ್ಟಾರ್ ಪ್ರಚಾರಕರಿಲ್ಲ ಎಂಬ ಬಿಜೆಪಿ ನಾಯಕರ ಟೀಕೆಗೆ ಪ್ರತಿಕ್ರಿಯಿಸಿ, ನಮ್ಮಲ್ಲಿಯೂ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ರಣದೀಪ್ ಸಿಂಗ್ ಸುರ್ಜೇವಾಲ, ವೇಣುಗೋಪಾಲ್ ಇದ್ದಾರೆ ಎಂದು ತಿರುಗೇಟು ಕೊಟ್ಟರು. ನಂತರ ನಡೆದ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ತಾಜ್ ಹೋಟೆಲ್ನಲ್ಲಿದ್ದುಕೊಂಡೇ ಅಧಿಕಾರ ಚಲಾಯಿಸುತ್ತಿದ್ದರು. ಶಾಸಕರನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಕಾಂಗ್ರೆಸ್ ಶಾಸಕರ ಜೊತೆ ಬೇಜವಾಬ್ದಾರಿ ವರ್ತಸಿದ ಹಿನ್ನೆಲೆ ಕುಮಾರಸ್ವಾಮಿ ಸ್ವಾಮಿ ಅಧಿಕಾರ ಕಳೆದುಕೊಂಡರು. ಆಗ ಇದನ್ನೇ ಕಾಯುತ್ತಿದ್ದ ಬಿಜೆಪಿ ಪಕ್ಷದವರು ಒಬ್ಬೊಬ್ಬ ಶಾಸಕರಿಗೂ 25 ಕೋಟಿ ಕೊಟ್ಟು ಖರೀದಿ ಮಾಡಿ, ಅನೈತಿಕವಾಗಿ ಸರ್ಕಾರ ರಚನೆ ಮಾಡಿದರು ಎಂದರು.