ಬಾಗಲಕೋಟೆ:ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಪ್ರಜಾಧ್ವನಿ ಯಾತ್ರೆ ಸಮಾವೇಶದ ಮೂಲಕ ಬಾಗಲಕೋಟೆ ಜಿಲ್ಲೆಯ ಏಳು ಮತಕ್ಷೇತ್ರಗಳಲ್ಲಿ ಎರಡು ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಖಚಿತವಾಗಿ ಯಾರೆಂಬುದು ಎಂಬುದು ತಿಳಿದು ಬಂದಿದೆ. ಪ್ರಜಾಧ್ವನಿ ಯಾತ್ರೆ ಸಮಾವೇಶವು ಬಾದಾಮಿ ಮತಕ್ಷೇತ್ರದ ಬಿಟ್ಟರೆ, ಉಳಿದ ಆರು ಕ್ಷೇತ್ರದಲ್ಲಿ ಸಂಚಾರ ಮಾಡಿ, ಸಮಾವೇಶ ಮಾಡುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸುವಂತೆ ಮತದಾರರಿಗೆ ಸಿದ್ದರಾಮಯ್ಯ ಮನವಿ ಮಾಡಿಕೊಂಡಿದ್ದಾರೆ. ಇದರಲ್ಲಿ ಎರಡು ಕ್ಷೇತ್ರದ ಅಭ್ಯರ್ಥಿಗಳ ಹೆಸರು ಹೇಳಿ, ಇವರಿಗೆ ವೋಟು ಹಾಕಿ ಪಕ್ಷಗೆಲ್ಲಿಸುವಂತೆ ಮನವಿ ಮಾಡಿಕೊಂಡಿದ್ದರೆ. ಉಳಿದ ಕ್ಷೇತ್ರದಲ್ಲಿ ಯಾರೇ ನಿಂತರೂ ಒಗ್ಗಟ್ಟಿನ ಮಂತ್ರ ಜಪಿಸುವಂತೆ ಕಿವಿ ಮಾತು ಹೇಳಿದ್ದಾರೆ.
ವಿಜಯಾನಂದ ಕಾಶಪ್ಪನವರ ಅವರಿಗೆ ಟಿಕೆಟ್ ಮುನ್ಸೂಚನೆ:ಕಳೆದ ಫೆ. 24 ರಂದು ಹುನಗುಂದ ಮತಕ್ಷೇತ್ರದಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರಜಾಧ್ವನಿ ಯಾತ್ರೆ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಬಹಿರಂಗ ಭಾಷಣದಲ್ಲಿ ಮಾಜಿ ಸಿದ್ದರಾಮಯ್ಯ ಮಾತನಾಡಿ, ಮುಂದಿನ ಭಾರಿ ವಿಜಯಾನಂದ ಕಾಶಪ್ಪನವರ ಅಧಿಕ ಮತಗಳಿಂದ ಅಂತರ ಜಯಗಳಿಸುವಂತೆ ಮಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವಂತೆ ಮಾಡಬೇಕಾಗಿದೆ ಎಂದು ಮನವಿ ಮಾಡಿಕೊಂಡರು. ಇದರಿಂದ ವಿಜಯಾನಂದ ಅವರ ಟಿಕೆಟ್ ಪಕ್ಕಾ ಎಂದು ಮಾತುಗಳು ಕೇಳಿ ಬರುತ್ತಿದೆ.
ಆನಂದ ನ್ಯಾಮಗೌಡರ ಮತ್ತೆ ಗೆಲ್ಲಿಸುವಂತೆ ಮನವಿ:ಇನ್ನು ಕಳೆದ ಎರಡು ದಿನಗಳ ಹಿಂದೆ ಜಮಖಂಡಿ ಮತಕ್ಷೇತ್ರದಲ್ಲಿ ಯಾತ್ರೆಯ ಸಮಾವೇಶದಲ್ಲಿ ಆನಂದ ನ್ಯಾಮಗೌಡರ ಅವರ ಕೆಲಸ ಕಾರ್ಯಗಳನ್ನು ಹೂಗಳಿದ್ದಾರೆ. ಅಲ್ಲದೇ ಉಪ ಚುನಾವಣೆಯಲ್ಲಿ 30 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಜಯಗಳಿಸಿರುವ ಆನಂದ ನ್ಯಾಮಗೌಡರ ಅವರನ್ನು ಮತ್ತೊಮ್ಮೆ ಶಾಸಕರನ್ನಾಗಿ ಮಾಡಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಮನವಿ ಮಾಡಿದ್ದರು. ಇದು ಆನಂದ ನ್ಯಾಮಗೌಡ ಅವರೇ ಅಭ್ಯರ್ಥಿ ಎಂಬುದನ್ನು ಸೂಚಿಸುವಂತಿತ್ತು.
ತೇರದಾಳ 16 ಜನ ಆಕಾಂಕ್ಷಿಗಳು:ಜಮಖಂಡಿ ಬಳಿಕ ತೇರದಾಳ ಮತಕ್ಷೇತ್ರದ ಯಾತ್ರೆ ನಿಮಿತ್ತ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಗ್ಗೆ ಖಚಿತ ಯಾರು ಅಂತ ಹೇಳಲಿಲ್ಲ. ಏಕೆಂದರೆ ಈ ಕ್ಷೇತ್ರದಲ್ಲಿ ಉಮಾಶ್ರೀ ಸೇರಿದಂತೆ ಸುಮಾರು 16 ಜನ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಇದರಿಂದ ಸಿದ್ದರಾಮಯ್ಯ ಭಾಷಣದಲ್ಲಿ ಯಾರಿಗೆ ಟಿಕೆಟ್ ನೀಡಿದರೂ, ಎಲ್ಲರೂ ಸೇರಿ ಪಕ್ಷ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಮನವಿಮಾಡಿದ್ದಾರೆ. ಈ ಮೂಲಕ ಟಿಕೆಟ್ ಯಾರಿಗೆ ಎಂಬುದು ಕುತೂಹಲ ಮೂಡಿಸಿದೆ.
ಮುಧೋಳ ಗಲಾಟೆ ಮಾಡದಂತೆ ಪ್ರಮಾಣ:ಇದಾದ ಬಳಿಕ ಮುಧೋಳ ಕ್ಷೇತ್ರದಲ್ಲಿ ಹಮ್ನಿಕೊಂಡಿದ್ದ ಸಮಾವೇಶದಲ್ಲಿ ಸಹ ಯಾರಿಗೆ ಟಿಕೆಟ್ ಎಂಬುದು ಗೊಂದಲ ಮೂಡಿಸಿದೆ. ಏಕೆಂದರೆ ಮಾಜಿ ಸಚಿವ ಆರ್ ಬಿ ತಿಮ್ಮಾಪೂರ ಹಾಗೂ ಸತೀಶ ಬಂಡಿವಡ್ಡರ ನಡುವೆ ಟಿಕೆಟ್ಗಾಗಿ ಮುಸುಕಿನ ಗುದ್ದಾಟ ಇತ್ತು. ಇಬ್ಬರಿಗೂ ಒಂದೇ ವೇದಿಕೆಯಲ್ಲಿ ಕೂರಿಸಿ ಯಾರಿಗೆ ಟಿಕೆಟ್ ನೀಡಿದರು ಒಗ್ಗಟಾಗಿ ಕೆಲಸ ಮಾಡಬೇಕು ಎಂದು ಲೋಕೇಶ್ವರ ದೇವಾಲಯದಲ್ಲಿ ಪ್ರಮಾಣ ಮಾಡಿಸಲಾಗಿದೆ.