ಬಾಗಲಕೋಟೆ: ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ವೇಷ ಬದಲಾವಣೆ ಮಾಡುತ್ತಾ ಅಲೆಯುತ್ತಿದ್ದಾರೆ. ಹೀಗಾಗಿ ಅವರಿಗೆ ಯಾವುದೇ ಕ್ಷೇತ್ರ ಸಿಗುತ್ತಿಲ್ಲ ಎಂದು ಸಚಿವ ಶ್ರೀರಾಮಲು ಬಾಗಲಕೋಟೆಯಲ್ಲಿ ವ್ಯಂಗ್ಯವಾಡಿದ್ದಾರೆ.
ಶಾಲಾ ಮಕ್ಕಳ ಶೂ-ಸಾಕ್ಸ್ ಹಂಚಿಕೆ ವಿಚಾರವಾಗಿ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಶೂ - ಸಾಕ್ಸ್ ಹಂಚಿಕೆ ಸ್ವಲ್ಪ ಲೇಟಾಗಿದೆ. ಆದರೂ ಕೂಡಾ ಎಲ್ಲ ಕಡೆ ಶೂ-ಸಾಕ್ಸ್, ಶಾಲಾ ಸಮವಸ್ತ್ರ ಹಂಚಿಕೆ ಮಾಡಲಾಗುತ್ತಿದೆ ಎಂದರು. ಅದನ್ನೇ ಕಾಂಗ್ರೆಸ್ ದೊಡ್ಡ ರಾದ್ದಾಂತ ಮಾಡುವ ಮೂಲಕ ರಾಜಕಾರಣ ಮಾಡುತ್ತಿದೆ ಎಂದರು.
ಬಾದಾಮಿ ಕ್ಷೇತ್ರದಿಂದ ಪಾಲಾಯನ ಮಾಡಿದ ಸಿದ್ದರಾಮಯ್ಯ ಕ್ಷೇತ್ರ ಹುಡುಕಿಕೊಂಡು ಹೋಗುತ್ತಿದ್ದಾರೆ. ಚಾಮರಾಜ್ ಪೇಟೆ, ವರುಣಾ, ಕೋಲಾರ, ಸೌದತ್ತಿ ಅಂತಾ ಹೇಳುತ್ತಾ ವೇಷ ಬದಲಾವಣೆ ಮಾಡುತ್ತಾ ಅಲೆಯುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಇದೇ ಸಂದರ್ಭದಲ್ಲಿ ಸಿದ್ದರಾಮೋತ್ಸವಕ್ಕೆ ಹೋಗ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಾವು ಹೋಗೋ ಪ್ರಶ್ನೆಯೇ ಇಲ್ಲ. ನಾವು ಮೊದಲಿನಿಂದಲೂ ಅವರನ್ನು ವಿರೋಧ ಮಾಡಿಕೊಂಡು ಬಂದಿದ್ದೇವೆ ಎಂದರು.