ಬಾಗಲಕೋಟೆ: ಗ್ಲೋಬಲ್ ವಾರ್ಮಿಂಗ್ ಸಿಕ್ಕಾಪಟ್ಟೆ ಜಾಸ್ತಿಯಾಗಿದೆ. ಉಷ್ಣತೆ ಮತ್ತು ಮಾಲಿನ್ಯ ನಿಯಂತ್ರಣಕ್ಕೆ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅಭಿವೃದ್ಧಿ ಹೆಸರಲ್ಲಿ ಕಾಡಿನ ನಾಶವೇ ಇಷ್ಟೆಲ್ಲಾ ಅನಾಹುತಗಳಿಗೆ ಕಾರಣವಾಗಿದೆ. ಉಸಿರು ನೀಡುವ ಹಸಿರಿಗಾಗಿ ಲೋಕಾಪುರದಲ್ಲಿ ಸಮಾನ ಮನಸ್ಕ ಪರಿಸರ ಪ್ರೇಮಿಗಳಿಂದ ಸೀಡ್‌ಬಾಲ್ ಅಭಿಯಾನ ಶುರುವಾಗಿದೆ.
ಕಾಲ-ಕಾಲಕ್ಕೆ ಮಳೆ ಬರಲ್ಲ. ಬೇಸಿಗೆ ಶುರುವಾಗೋ ಮೊದಲೇ ನೀರು ಬತ್ತಿ ಹೋಗುತ್ತಿದೆ. ಸೂರ್ಯನ ಶಾಖ ವಿಪರೀತವಾಗಿದ್ದು, ಉಷ್ಣಾಂಶದಲ್ಲಿ ಏರುಪೇರಾಗಿದೆ. ಕಾಡು ನಾಶವೇ ಇದಕ್ಕೆಲ್ಲಾ ಮೂಲ ಕಾರಣ ಅನ್ನೋದ್ರಲ್ಲಿ ಸಂಶಯವೇ ಇಲ್ಲ.
ಈ ಹಿನ್ನೆಲೆಯಲ್ಲಿ ಸಮಾನ ಮನಸ್ಕರು ಸುಮಾರು ಎರಡು ಸಾವಿರಕ್ಕೂ ಹೆಚ್ಚು ವಿವಿಧ ಸಸಿಗಳ ಬೀಜದುಂಡೆ ( ಸೀಡ್ ಬಾಲ್)ಗಳನ್ನು ತಯಾರು ಮಾಡುತ್ತಿದ್ದಾರೆ. ಹಿಂದೆಲ್ಲಾ ಬೀಜೋತ್ಪತ್ತಿ ತನ್ನಿಂದ ತಾನೇ ನಡೆಯುತ್ತಿತ್ತು. ಆದ್ರೆ, ಈಗ ಪರಿಸ್ಥಿತಿ ಹಾಗೆ ಇಲ್ಲ. ನೇರವಾಗಿ ಬೀಜ ಒಗೆದರೆ, ಅದು ಮೊಳಕೆ ಒಡೆಯಲ್ಲ. ಭೂಮಿಯಲ್ಲಿ ಪೋಷಕಾಂಶ ಇರಲಿಕ್ಕಿಲ್ಲ. ಆ ನಿಟ್ಟಿನಲ್ಲಿ ಬೀಜದುಂಡೆ ಮಾಡಲಾಗುತ್ತಿದೆ.
ಸಣ್ಣಪುಟ್ಟ ಸಂಘಟನೆಗಳು ಇದರಲ್ಲಿ ತೊಡಗಿಸಿಕೊಂಡು ಪರಿಸರ ರಕ್ಷಣೆ ಮಾಡಿದ್ರೆ ನಮ್ಮ ರಕ್ಷಣೆ ಮಾಡಿದಂತೆ. ಹೀಗಾಗಿ, ಇಂದಿನ ಪೀಳಿಗೆಗೆ ನಮ್ಮ ಹಿರಿಯರು ಪರಿಸರ ಉಳಿಸಿದ್ದಾರೆ. ನಾವು ಮುಂದಿನ ಪೀಳಿಗೆಗೆ ಏನು ಮಾಡಿದ್ದೇವೆ ಎಂಬ ಪ್ರಶ್ನೆ ಹಾಕಿಕೊಂಡು ಲೋಕಾಪುರದ ಪರಿಸರ ಪ್ರೇಮಿಗಳಾದ ವಿಕ್ರಮ್ ನಂದಯ್ಯಗೋಳ ಮತ್ತು ಮಂಜುನಾಥ ಕಂಬಾರ್ ನೇತೃತ್ವದ ಬೀಜದುಂಡೆ ತಯಾರು ಮಾಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾಗಿ ಪರಿಸರ ಪ್ರೇಮಿ, ಪತ್ರಕರ್ತ ಪರಶುರಾಮ್ ಪೇಟಕರ್ ಹೇಳುತ್ತಾರೆ.
ಏನಿದು ಬೀಜದುಂಡೆ (ಸೀಡ್ ಬಾಲ್)ಕಾನ್ಸೆಪ್ಟ್?:ಮಣ್ಣು-ಸಗಣಿ-ಗೋಮೂತ್ರವನ್ನು ಮಿಶ್ರಣ ಮಾಡಿ ಮಣ್ಣಿನ ಉಂಡೆಯನ್ನು ತಯಾರು ಮಾಡಿ, ಅದರೊಳಗೆ ಬೀಜವಿಟ್ಟು ಮುಚ್ಚಲಾಗುತ್ತದೆ. ಬೀಜದುಂಡೆಯನ್ನು ಹದ ಬಿಸಿಲಿನಲ್ಲಿ ಒಂದೆರಡು ದಿನ ಒಣಗಿಸಿ, ಮಳೆಗಾಲ ಆರಂಭದಲ್ಲಿ ಅಲ್ಲಲ್ಲಿ ಈ ಬೀಜದುಂಡೆಗಳನ್ನು ಎಸೆಯಲಾಗುತ್ತದೆ. ಮಳೆ ಬಿದ್ದೊಡನೆ ಮಣ್ಣು ತೇವಗೊಂಡು ಬೀಜ ಮೊಳಕೆಯೊಡೆಯುತ್ತದೆ. ಸಸಿಗೆ ಬೇಕಾದಷ್ಟು ಪೋಷಕಾಂಶ ಸುತ್ತಲೂ ಮೊದಲೇ ರೆಡಿಯಾಗಿರುತ್ತದೆ. ಗಿಡ ಮರವಾಗಿ ಬೆಳೆಯುತ್ತದೆ ಎಂಬುದು ಈ ಸೀಡ್ಬಾಲ್ನ ಕಾನ್ಸೆಪ್ಟ್.
ಲೋಕಾಪುರದ ಪರಿಸರ ಪ್ರೇಮಿಗಳು ತಮ್ಮ ಅರಣ್ಯ ಇಲಾಖೆಯ ಸಹಾಯ, ಸಹಕಾರದೊಂದಿಗೆ ಎಲ್ಲ ಯುವ ಸಮಾನ ಮನಸ್ಕರು ಸೇರಿ ಬೀಜದುಂಡೆ ತಯಾರಿಸುತ್ತಿದ್ದಾರೆ. ಇದೇ ಜೂನ್ 5 ರಂದು ವಿಶ್ವಪರಿಸರ ದಿನದಂದು ಈ ಬೀಜದ ಉಂಡೆಗಳನ್ನು ಗುಡ್ಡದ ಮೇಲೆ ಹಾಕಬೇಕು ಎಂದು ಉದ್ದೇಶ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಸಕಲ ಸಿದ್ಧತೆ ನಡೆಯುತ್ತಿದೆ. ಇಂತಹ ಪರಿಸರಮುಖಿ ಕಾರ್ಯಕ್ಕೆ ಎಲ್ಲೆಡೆಯಿಂದ ಪ್ರೋತ್ಸಾಹ ಪ್ರಶಂಸೆ ವ್ಯಕ್ತವಾಗುತ್ತಿದೆ.