ಕರ್ನಾಟಕ

karnataka

ETV Bharat / state

21 ಹೊಸ ವಿದ್ಯುತ್ ಉಪ ಕೇಂದ್ರಗಳ ಸ್ಥಾಪನೆಗೆ ಮಂಜೂರಾತಿ: ಡಿಸಿಎಂ ಕಾರಜೋಳ

21 ಹೊಸ ವಿದ್ಯುತ್ ಉಪ ಕೇಂದ್ರಗಳ ಸ್ಥಾಪನೆಗೆ 280 ಕೋಟಿ ರೂ.ಗಳ ಅನುದಾನ ಮಂಜೂರಾಗಿದೆ. ಈ ಕಾರ್ಯ ಒಂದೂವರೆ ವರ್ಷದಲ್ಲಿ ಪೂರ್ಣಗೊಂಡು ವಿದ್ಯುತ್ ಪೂರೈಸುವ ಕಾರ್ಯ ಪ್ರಾರಂಭವಾಗಬೇಕು ಎಂದು ಡಿಸಿಎಂ ಗೋವಿಂದ ಕಾರಜೋಳ ತಿಳಿಸಿದರು.

By

Published : Feb 11, 2021, 7:27 PM IST

Progress Review Meeting of KPTCL and Hescom
ಕೆಪಿಟಿಸಿಎಲ್ ಮತ್ತು ಹೆಸ್ಕಾಂ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ

ಬಾಗಲಕೋಟೆ: ದೇಶದಲ್ಲಿಯೇ ಕರ್ನಾಟಕ ರಾಜ್ಯ ವಿದ್ಯುತ್ ಕ್ಷೇತ್ರದಲ್ಲಿ ಹೆಚ್ಚು ಮುಂದುವರೆಯಲಿದ್ದು, ಕ್ರಾಂತಿ ಮಾಡುತ್ತಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದರು.

ಜಿಲ್ಲಾ ಪಂಚಾಯತ್​ ನೂತನ ಸಭಾಭವನದಲ್ಲಿ ಇಂದು ಕೆಪಿಟಿಸಿಎಲ್ ಮತ್ತು ಹೆಸ್ಕಾಂ ಇಲಾಖೆಗೆ ಸಂಬಂಧಿಸಿದ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 21 ಹೊಸ ವಿದ್ಯುತ್ ಉಪ ಕೇಂದ್ರಗಳ ಸ್ಥಾಪನೆಗೆ 280 ಕೋಟಿ ರೂ.ಗಳ ಅನುದಾನ ಮಂಜೂರಾಗಿದೆ. ಈ ಕಾರ್ಯ ಒಂದೂವರೆ ವರ್ಷದಲ್ಲಿ ಪೂರ್ಣಗೊಂಡು ವಿದ್ಯುತ್ ಪೂರೈಸುವ ಕಾರ್ಯ ಪ್ರಾರಂಭವಾಗಬೇಕು ಎಂದು ತಿಳಿಸಿದರು.

ಜಿಲ್ಲೆಗೆ ಒಟ್ಟು 100 ವಿದ್ಯುತ್ ಕೇಂದ್ರಗಳ ಅವಶ್ಯಕತೆಯಿದ್ದು, ಈಗಾಗಲೇ ಜಿಲ್ಲೆಯಲ್ಲಿ 69 ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. 21 ಕೇಂದ್ರಗಳಿಗೆ ಮಂಜೂರಾತಿ ದೊರೆತಿದ್ದು, ಇನ್ನು 10 ವಿದ್ಯುತ್ ಕೇಂದ್ರಗಳ ಅವಶ್ಯಕತೆ ಇರುವುದರಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದಲ್ಲಿ ಮಂಜೂರಾತಿಗೆ ಕ್ರಮ ಕೈಗೊಳ್ಳಲಾಗುವುದು. ಇದರಿಂದ ಜಿಲ್ಲೆಯಲ್ಲಿ ಮುಂದಿನ 25 ವರ್ಷಗಳವರೆಗೆ ವಿದ್ಯುತ್ ಸಮಸ್ಯೆ ಇರುವದಿಲ್ಲ ಎಂದು ಡಿಸಿಎಂ ಕಾರಜೋಳ ತಿಳಿಸಿದರು.

ಜಿಲ್ಲೆಯಲ್ಲಿ ಐಟಿ ಸೆಕ್ಟರ್​​ಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಶೇ.100 ರಷ್ಟು ಲೋಡ್ ಆಗುತ್ತಿದೆ. ಇದರಿಂದ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ವ್ಯವಸ್ಥೆ ಬದಲಾವಣೆಯಾಗಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮವಹಿಸುವ ಅಗತ್ಯವಿದೆ. ವ್ಯವಸ್ಥೆಯ ಪ್ರಗತಿಗೆ 220 ಕೋಟಿ ರೂ. ನೀಡಲಾಗಿದೆ. ಒಟ್ಟಾರೆಯಾಗಿ ವಿದ್ಯುತ್‍ಗೆ ಸಂಬಂಧಿಸಿದಂತೆ ವಿವಿಧ ಕಾಮಗಾರಿಗಳಿಗಾಗಿ ಒಟ್ಟು 500 ಕೋಟಿ ರೂ.ಗಳಿಗೆ ಮಂಜೂರಾತಿ ದೊರೆತಿದೆ ಎಂದು ಅವರು ತಿಳಿಸಿದರು.

ಲೋಕಾಪೂರದಲ್ಲಿ 400 ಕೆವಿ ಸ್ಟೇಷನ್ ನಿರ್ಮಾಣ ಕಾರ್ಯ ನಡೆದಿದ್ದು, ಇಂತಹ ದೊಡ್ಡ ಪ್ರಮಾಣದ ವಿದ್ಯುತ್ ಸ್ಟೇಷನ್ ನಿರ್ಮಾಣವಾಗುತ್ತಿರುವುದು ರಾಜ್ಯದಲ್ಲಿಯೇ ಬಹಳ ಕಡಿಮೆ. ವಿದ್ಯುತ್ ಸಂಪರ್ಕದಲ್ಲಿ ಏನಾದರೂ ತಾಂತ್ರಿಕ ತೊಂದರೆಯಾದಲ್ಲಿ ಬೇರ ಸಂಪರ್ಕ ಜೋಡನೆಗೆ ಅವಕಾಶವಿದೆ. ಇದರಿಂದ ವಿದ್ಯುತ್ ಸರಬರಾಜಿನಲ್ಲಿ ಯಾವುದೇ ತೊಂದರೆಯಾಗುವುದಿಲ್ಲ.

ದೇಶದಲ್ಲಿ ವಿದ್ಯುತ್ ಉತ್ಪಾದನೆಯಲ್ಲಿ ಕರ್ನಾಟಕ ರಾಜ್ಯ ಮುಂಚೂಣಿಯಲ್ಲಿದೆ. ರಾಜ್ಯದಲ್ಲಿ ಜಲವಿದ್ಯುತ್, ಪವನಶಕ್ತಿ, ಸೋಲಾರ್​, ಥರ್ಮಲ್ ಹಾಗೂ ಓಜೋನ್‍ದಿಂದ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಹಗಲು 4 ಗಂಟೆ ಮತ್ತು ರಾತ್ರಿ 3 ಗಂಟೆಗಳ ಕಾಲ 3 - ಫೇಸ್ ವಿದ್ಯುತ್ ನೀಡಲಾಗುತ್ತಿದೆ. ರಾತ್ರಿ ವೇಳೆಯಲ್ಲಿ ಪಂಪ್‍ಸೆಟ್ ನಿರಂತರವಾಗಿ ಚಾಲನೆ ಮಾಡುತ್ತಿರುವುದರಿಂದ ನೀರು ಪೋಲಾಗುತ್ತದೆ. ಇದರ ಬದಲಾಗಿ ಹಗಲಿನ ವೇಳೆಯಲ್ಲಿ 7 ಗಂಟೆಗಳ ಕಾಲ ನಿರಂತರವಾಗಿ ವಿದ್ಯುತ್ ಪೂರೈಸುವಂತೆ ಶಾಸಕ ವೀರಣ್ಣ ಚರಂತಿಮಠ ತಿಳಿಸಿದರು.

ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮುನಿರಾಜ ಮಾತನಾಡಿ, ಜಿಲ್ಲೆಯಲ್ಲಿ ಕುಡಿಯುವ ನೀರಿನ ಯೋಜನೆಗಳಿಗೆ ಸಂಬಂಧಿಸಿದಂತೆ ಪ್ರಸಕ್ತ ಸಾಲಿನಲ್ಲಿ 86 ಪೈಕಿ 78ಕ್ಕೆ ವಿದ್ಯುದೀಕರಣಗೊಳಿಸಲಾಗಿದೆ. 2019-20ರಲ್ಲಿ ಉಂಟಾದ ಪ್ರವಾಹದಿಂದ ವಿದ್ಯುತ್ ಇಲಾಖೆಗೆ ಒಟ್ಟು 39.10 ಕೋಟಿ ರೂ. ನಷ್ಟವಾಗಿದೆ. ಈ ಪೈಕಿ 31.28 ಕೋಟಿ ರೂ. ಪರಿಹಾರ ಬಿಡುಗಡೆಯಾಗಿದೆ. ವಿಫಲಗೊಂಡ 4,474 ಪರಿವರ್ತಕಗಳ ಪೈಕಿ 4,448 ಪರಿವರ್ತಕಗಳನ್ನು ಬದಲಾಯಿಸಲಾಗಿದೆ.

ಜಿಲ್ಲೆಯಲ್ಲಿ 35,440 ಅನಧಿಕೃತ ಪಂಪ್​ ಸೆಟ್‍ಗಳನ್ನು ಸಕ್ರಮೀಕರಣಗೊಳಿಸಲಾಗಿದೆ. ಶೀಘ್ರ ಸಂಪರ್ಕ ಯೋಜನೆಯಡಿ ಬಂದ 2,954 ಅರ್ಜಿಗಳ ಪೈಕಿ 114 ಮಾತ್ರ ಬಾಕಿ ಇರುತ್ತವೆ. ದೀನದಯಾಳ್​ ಉಪಾದ್ಯಾಯ ಗ್ರಾಮಜ್ಯೋತಿ ಯೋಜನೆಯಡಿ 8,287 ಮನೆಗಳಿಗೆ ಮತ್ತು ಪ್ರಧಾನಮಂತ್ರಿ ಸಹಜ್ ಬಿಜಲಿ ಹರ್ ಘರ್ ಯೋಜನೆಯಡಿ 11,404 ಮನೆಗಳಿಗೆ ವಿದ್ಯುದೀಕರಣಗೊಳಿಸಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಶಾಸಕ ವೀರಣ್ಣ ಚರಂತಿಮಠ, ಆನಂದ ನ್ಯಾಮಗೌಡ, ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಜಿ.ಪಂ ಸಿಇಒ ಟಿ.ಭೂಬಾಲನ್, ಹೆಸ್ಕಾಂ ತಾಂತ್ರಿಕ ನಿರ್ದೇಶಕ ಕಾಂಬಳೆ, ಕೆಪಿಟಿಸಿಎಲ್ ಮುಖ್ಯ ಇಂಜಿನಿಯರ್ ಮಂಜುನಾಥ, ಬೆಂಗಳೂರಿನ ಕೆಪಿಟಿಸಿಎಲ್ ಮುಖ್ಯ ಇಂಜಿನಿಯರ್ ವಿಶ್ವನಾಥ ನಾಯಕ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ABOUT THE AUTHOR

...view details