ಬಾಗಲಕೋಟೆ: ಸಾಗರೋತ್ತರ ಕನ್ನಡಿಗರು ನಡೆಸಿಕೊಡುವ ಸಾಗರೋತ್ತರ ಕನ್ನಡಿಗರ 14ನೇ ಸಂವಾದ ಕಾರ್ಯಕ್ರಮದ ಈ ಭಾನುವಾರದ ವಿಶೇಷ ಅತಿಥಿಗಳಾಗಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಭಾಗಿಯಾಗಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಇಟಲಿ ದೇಶದಿಂದ ಹೇಮೆಗೌಡ ಮಧು ನಡೆಸಿಕೊಟ್ಟರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾತನಾಡಿ, ಈ ಸಂವಾದದಲ್ಲಿ ಭಾಗವಹಿಸಿದ 50 ದೇಶಗಳಲ್ಲಿ ವಾಸಿಸುತ್ತಿರುವ ಎಲ್ಲರಿಗೂ ಅಭಿನಂದನೆ. ನೀವು ಎಲ್ಲರೂ ನಮ್ಮ ಕುಟುಂಬವಿದ್ದಂತೆ. ನೀವು ಎಲ್ಲೇ ಇದ್ದರೂ ಕೂಡ ಕನ್ನಡಕ್ಕಾಗಿ ನಿರಂತರವಾಗಿ ಕಾರ್ಯನಿರ್ವಹಿಸುತ್ತ ಬಂದಿದ್ದೀರಿ. ನಿಮ್ಮ ಕುಟುಂಬಕ್ಕೂ ಅಭಿನಂದನೆಗಳು ಎಂದು ಹೇಳಿ ಸಂವಾದವನ್ನು ಪ್ರಾರಂಭಿಸಿದರು.
ನೀವು ಸಾವಿರಾರು ಕಿ.ಮೀ. ದೂರವಿದ್ದರೂ ನೀವು ನಮ್ಮ ಜೊತೆಗಿದ್ದೀರಿ. ಸಾಗರೋತ್ತರ ಕನ್ನಡಿಗರ ನಡುವಳಿಕೆಗಳಿಗೆ ನನ್ನ ಹೃದಯ ತುಂಬಿದ ಕೃತಜ್ಞತೆ ಹೇಳಬಯಸುತ್ತೇನೆ. ನೀವು ಬೇರೆ ಬೇರೆ ದೇಶಗಳಲ್ಲಿದ್ದರೂ ಕನ್ನಡತನವನ್ನು ಮರೆಯದೇ "ಎಲ್ಲಾದರು ಇರು ಎಂತಾದರು ಇರು" ಎಂದು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಕ್ಕೆ ನನ್ನ ಧನ್ಯವಾದಗಳು ಎಂದರು.
ವಿದೇಶಕ್ಕೆ ಹೋದ ಜನರು ಇವತ್ತಿನ ದಿವಸ ಸಾಮಾಜಿಕ ಜಾಲತಾಣದ ಮುಖಾಂತರ ನಮ್ಮ ಮನೆಯ ಮತ್ತು ನಮ್ಮ ಕುಟುಂಬದ ಸದಸ್ಯರಾಗಿದ್ದೀರಿ. ಅಧಿಕಾರದಲ್ಲಿ ಇದ್ದಾಗ ಅನೇಕ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ನಾನು ಹಣ ಗಳಿಸಲು ಮುಖ್ಯಮಂತ್ರಿಯಾಗಲಿಲ್ಲ. ಹೆಸರು ಮಾಡಲು ಮುಖ್ಯಮಂತ್ರಿಯಾಗಲಿಲ್ಲ. ಈ ಕನ್ನಡ ನಾಡಿನ ಮಣ್ಣಿನ ಮಗನಾದ ನಾನು ನಮ್ಮ ರೈತರಿಗೋಸ್ಕರ ಸಾಕಷ್ಟು ಕೆಲಸ ಮಾಡಿದ್ದು, ಮುಂದೆಯೂ ಮಾಡುತ್ತೇನೆ. ನಮ್ಮ ಜನ ನನ್ನನ್ನು ಮರೆತಿಲ್ಲ. ನನ್ನನ್ನು ಎರಡು ಬಾರಿ ಮುಖ್ಯಮಂತ್ರಿಯನ್ನಾಗಿ ಮಾಡಿದ್ದಾರೆ. ಅವರ ಋಣ ನನ್ನ ಮೇಲೆ ಸಾಕಷ್ಟಿದೆ ಎಂದರು.
ಇದೇ ಸಮಯದಲ್ಲಿ ಡ್ರಗ್ಸ್ ವಿಚಾರವಾಗಿ ಮಾತನಾಡಿ, ಡ್ರಗ್ಸ್ ಮಾಫಿಯಾ ರಾಜ್ಯದಲ್ಲಿ ಮತ್ತು ದೇಶದಲ್ಲಿ ಸದ್ಯ ಮೀಡಿಯಾದಲ್ಲಿ ಕೂಡ ತಲ್ಲಣ ಹುಟ್ಟು ಹಾಕುತ್ತಿದೆ. ಅದನ್ನು ನಾವು ಬುಡ ಸಮೇತ ಕಿತ್ತು ಹಾಕಬೇಕಾಗಿದೆ ಎಂದರು. ನನ್ನ ಹತ್ತಿರ ಸಾಕಷ್ಟು ಜನಪರ ಯೋಜನೆಗಳಿವೆ. ಅದನ್ನ ನಾವು ಬೇರೆ ಪಕ್ಷದವರಿಗೆ ಹೇಳಿ ಮಾಡಿಸೋದು ಕಷ್ಟವಾಗುತ್ತದೆ.