ಬಾಗಲಕೋಟೆ:ಕೃಷ್ಣಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ಬ್ಯಾರೇಜ್ ಬಳಿ ಭೂ ಕುಸಿತ ಉಂಟಾಗುತ್ತಿದೆ.
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ 3.50 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಚಿಕ್ಕ ಪಡಸಲಗಿ ಬ್ಯಾರೇಜ್ ಬಳಿ ನಿರ್ಮಾಣ ಮಾಡಿರುವ ಶ್ರಮ ಬಿಂದು ಸಾಗರ ಬಳಿ ಭೂ ಕುಸಿತ ಉಂಟಾಗುತ್ತಿದೆ. ಸ್ಥಳಕ್ಕೆ ಶಾಸಕ ಆನಂದ ನ್ಯಾಮಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರೈತರು ನಿರ್ಮಾಣ ಮಾಡಿದ್ದ ಬ್ಯಾರೇಜ್ ಶ್ರಮ ಬಿಂದು ಸಾಗರ ಸಂಪೂರ್ಣ ಮುಳುಗಡೆಯಾಗಿ ವಿಜಯಪುರ- ಜಮಖಂಡಿ ಮಾರ್ಗದ ಪ್ರಮುಖ ರಸ್ತೆಯ ಸೇತುವೆ ಕೆಳಗಡೆ ನೀರು ಹರಿದು ಹೋಗುತ್ತಿದೆ. ಶ್ರಮ ಬಿಂದು ಸಾಗರಕ್ಕೆ ಸಂಬಂಧಪಟ್ಟಂತೆ ಅಳವಡಿಸಿರುವ ವಿದ್ಯುತ್ ಪಂಪ ಸೆಟ್ಗಳ ಕಾರ್ಯ ನಿರ್ವಹಣೆ ಮಾಡುವ ಕೊಠಡಿ ಹತ್ತಿರ ಮಣ್ಣು ಕುಸಿದು ನೀರು ಪಾಲಾಗುತ್ತಿದೆ. ಇದನ್ನು ತಡೆಯಲು ಶಾಸಕರ ನೇತೃತ್ವದಲ್ಲಿ ಕಾರ್ಯಚರಣೆ ನಡೆಯುತ್ತಿದೆ.
ಶಾಸಕ ಆನಂದ ನ್ಯಾಮಗೌಡ ಪ್ರತಿಕ್ರಿಯೆ ನೀಡಿದ್ದು, ಕೊಯ್ನಾ ಜಲಾಶಯದಿಂದ ಹಿಪ್ಪರಗಿ ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಇದರಿಂದ ಚಿಕ್ಕಪಡಲಗಿ ಸೇತುವೆ ಬಳಿ ಮಣ್ಣು ಕುಸಿಯುತ್ತಿದೆ. ಮುಂದೆ ಯಾವುದೇ ಅಪಾಯ ಆಗಬಾರದೆಂಬ ದೃಷ್ಟಿಯಿಂದ ಕಲ್ಲು, ಮಲ್ಲು ಹಾಕುವ ಕೆಲಸ ಮಾಡಲಾಗಿದೆ. ನದಿ ತೀರದ ಗ್ರಾಮಗಳ ಪ್ರವಾಹ ಭೀತಿ ಉಂಟಾಗಿದ್ದು,ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದರು.