ಬಾಗಲಕೋಟೆ: ಐತಿಹಾಸಿಕ ಕೇಂದ್ರ, ವಿಶ್ವವಿಖ್ಯಾತ ಪ್ರವಾಸಿಗರ ತಾಣವಾಗಿರುವ ಜಿಲ್ಲೆಯ ಐಹೊಳೆ ಗ್ರಾಮವನ್ನು ಸ್ಥಳಾಂತರ ಮಾಡಬೇಕೆಂಬ ಬೇಡಿಕೆ ನನೆಗುದಿಗೆ ಬಿದ್ದಿದೆ.
ವಿಶ್ವವಿಖ್ಯಾತ ಪ್ರವಾಸಿಗರ ತಾಣ ಐಹೊಳೆ ಗ್ರಾಮ.. ಕಳೆದ ಒಂದು ದಶಕಕ್ಕೂ ಅಧಿಕ ಕಾಲ ಐಹೊಳೆ ಗ್ರಾಮ ಸ್ಥಳಾಂತರ ಮಾಡಬೇಕು ಅನ್ನುವ ಕೂಗು ಇದೀಗ ಮೌನವಾಗಿದೆ. ಈ ಹಿಂದೆ ಬಿಜೆಪಿ ಪಕ್ಷ ಅಧಿಕಾರದಲ್ಲಿದ್ದಾಗ ಐಹೊಳೆ ಗ್ರಾಮ ಸ್ಥಳಾಂತರಕ್ಕೆ ಪ್ರಾಮುಖ್ಯತೆ ಸಿಕ್ಕಿತ್ತು. ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದಾಗ ಸ್ಥಳಾಂತರದ ಘೋಷಣೆ ಮಾಡಿದ್ದರು.
ನಂತರ ಬಿಜೆಪಿ ಪಕ್ಷದಲ್ಲಿ ವಿವಾದ ಉಂಟಾಗಿ ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವಂತಾಯಿತು. ತದ ನಂತರ ಹುಬ್ಬಳ್ಳಿಯವರೇ ಆದ ಜಗದೀಶ ಶೆಟ್ಟರ್ ಮುಖ್ಯಮಂತ್ರಿ ಆದರು. ಜಗದೀಶ ಶೆಟ್ಟರ್ ಅವರು ಐಹೊಳೆ ಗ್ರಾಮ ಸ್ಥಳಾಂತರಕ್ಕೆ ಮುತುರ್ವಜಿ ವಹಿಸಿ, ನಾಲ್ಕು ನೂರು ಕೋಟಿ ರೂಪಾಯಿಗಳನ್ನು ಬಜೆಟ್ನಲ್ಲಿ ಬಿಡುಗಡೆ ಮಾಡಿದ್ದರು. ಜೊತೆಗೆ ಭೂಮಿ ಪೂಜೆ ಸಹ ಜರುಗಿತ್ತು. ಆದರೂ ಸಹ ಇದುವರೆಗೂ ಜನಪ್ರತಿನಿಧಿಗಳ ನಿರ್ಲಕ್ಯದಿಂದಾಗಿ ಈ ಯೋಜನೆ ನೆನೆಗುದಿಗೆ ಬಿದ್ದಿದೆ.
ಚಾಲುಕ್ಯರ ಕಾಲದಲ್ಲಿ ನಿರ್ಮಾಣವಾಗಿರುವ ಐಹೊಳೆ ಗ್ರಾಮದಲ್ಲಿ ದುರ್ಗಾದೇವಿ ದೇವಾಲಯ ಪ್ರಮುಖ ಆಕರ್ಷಣೆ ಕೇಂದ್ರವಾಗಿದ್ದು, ವಿವಿಧ ದೇವಾಲಯಗಳ ತಾಣವಾಗಿದೆ. ಹೀಗಾಗಿ ದೇಶ ವಿದೇಶಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಆದರೆ, ಇಲ್ಲಿನ ಜನತೆ ಮಾತ್ರ ಸ್ಮಾರಕಗಳ ಅಕ್ಕಪಕ್ಕದಲೇ ಮನೆಗಳನ್ನು ನಿರ್ಮಾಣ ಮಾಡಿದ್ದಾರೆ. ತಿಪ್ಪೆ, ದಡ್ಡಿ ಸೇರಿದಂತೆ ತಮ್ಮ ಜಾನುವಾರುಗಳನ್ನು ಸ್ಮಾರಕಗಳ ಹತ್ತಿರವೇ ಕಟ್ಟುತ್ತಾರೆ. ಹೀಗಾಗಿ ಪ್ರವಾಸಿಗರಿಗೆ ಇರುಸು ಮುರುಸು ಉಂಟಾಗುತ್ತಿದೆ.
ಇನ್ನು ಪುರಾತತ್ವ ಇಲಾಖೆಯವರು ಇಲ್ಲಿ ಒಂದಿಂಚು ಜಾಗ ಅಗೆಯುವುದಕ್ಕೂ ಬಿಡುವುದಿಲ್ಲ, ತೆರವು ಮಾಡುವುದಕ್ಕೂ ಬಿಡುವುದಿಲ್ಲ. ಹೀಗಾಗಿ ಸ್ಮಾರಕದ ಪ್ರಮುಖ ರಸ್ತೆಗಳನ್ನು ಸರಿ ಮಾಡಲು ಸಹ ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆ ಇಲ್ಲಿನ ಗ್ರಾಮಸ್ಥರು ಸಂಪೂರ್ಣ ಗ್ರಾಮ ಸ್ಥಳಾಂತರ ಮಾಡುಬೇಕು ಎಂದು ಕಳೆದ ಒಂದು ದಶಕದಿಂದ ಹೋರಾಟ ಮಾಡುತ್ತಾ ಬಂದಿದ್ದಾರೆ. ಹಿಂದೆ ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದಾಗ ಸ್ಥಳಾಂತರದ ಬಗ್ಗೆ ಹೆಚ್ಚು ಒತ್ತು ನೀಡಿದ್ದರು.
ಇದೀಗ ಮತ್ತೆ ಯಡಿಯೂರಪ್ಪನವರೇ ಮುಖ್ಯಮಂತ್ರಿ ಆಗಿದ್ದಾರೆ. ಈ ಬಾರಿ ಬಜೆಟ್ ಮಂಡನೆ ಮಾಡುವಾಗ ಐಹೊಳೆ ಸ್ಥಳಾಂತರಕ್ಕೆ ಹೆಚ್ಚು ಒತ್ತು ನೀಡಬೇಕಿದೆ. ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ಸ್ಥಳಾಂತರದ ಬಗ್ಗೆ ಗಮನ ಹರಿಸಬೇಕಾಗಿದೆ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.