ಕರ್ನಾಟಕ

karnataka

ETV Bharat / state

ಬಾಗಲಕೋಟೆ ಸಂತ್ರಸ್ತರಿಗೆ ರೆಡ್ ಕ್ರಾಸ್ ನೆರವಿನ ಹಸ್ತ - ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಬಾಗಲಕೋಟೆ ಜಿಲ್ಲಾ ಘಟಕ

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಬಾಗಲಕೋಟೆ ಜಿಲ್ಲಾ ಘಟಕವು ಜಿಲ್ಲೆಯ ಮುಧೋಳ ತಾಲೂಕಿನ ಬುದ್ನಿ ಬಿ.ಕೆ.ಗ್ರಾಮದಲ್ಲಿ ಪ್ರವಾಹ ಸಂತ್ರಸ್ತ ಕುಟುಂಬಗಳಿಗೆ ಅಗತ್ಯ ವಸ್ತುಗಳನ್ನು ನೀಡಿದರು.

ಬಾಗಲಕೋಟೆ ಸಂತ್ರಸ್ತರಿಗೆ ರೆಡ್ ಕ್ರಾಸ್ ನೆರವಿನ ಹಸ್ತ

By

Published : Sep 7, 2019, 2:02 PM IST

ಬಾಗಲಕೋಟೆ: ಪ್ರವಾಹ ಸಂತ್ರಸ್ತರಿಗೆ ನೆರವಿನ ಹಸ್ತ ಚಾಚುತ್ತಿರುವ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಬಾಗಲಕೋಟೆ ಜಿಲ್ಲಾ ಘಟಕವು ಶುಕ್ರವಾರ ಜಿಲ್ಲೆಯ ಮುಧೋಳ ತಾಲೂಕಿನ ಬುದ್ನಿ ಬಿ.ಕೆ.ಗ್ರಾಮದಲ್ಲಿ ವಿವಿಧ ಅಗತ್ಯ ವಸ್ತುಗಳನ್ನು ನೀಡಿದರು.

ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 250 ಕ್ಕೂ ಹೆಚ್ಚು ಸಂತ್ರಸ್ತ ಕುಟುಂಬಗಳಿಗೆ ಸೀರೆ, ಲುಂಗಿ, ಸೋಪು, ಪೇಸ್ಟ್, ಗೋದಿಹಿಟ್ಟು, ಹೆಸರು ಬೇಳೆ, ಉಪ್ಪು, ಸಾಂಬಾರ್​ ಪುಡಿ, 10 ಕೆ.ಜಿ ಅಕ್ಕಿ, ಚಹಾ ಪುಡಿ, ಹಾಸಿಗೆ, ಹೊದಿಕೆ, ಮಕ್ಕಳಿಗೆ ಸ್ಕೂಲ್​ ಬ್ಯಾಗ್​​,ಬಟ್ಟೆ, ಟೀಶರ್ಟ್, ಬಿಸ್ಕತ್ ಒಳಗೊಂಡಂತೆ ಅಗತ್ಯ ವಸ್ತುಗಳಿರುವ ಫ್ಯಾಮಿಲಿ ಕಿಟ್ ವಿತರಿಸಲಾಯಿತು.

ಬಾಗಲಕೋಟೆ ಸಂತ್ರಸ್ತರಿಗೆ ರೆಡ್ ಕ್ರಾಸ್ ನೆರವಿನ ಹಸ್ತ

ಬಳಿಕ ಗ್ರಾಮದ ಪ್ರವಾಹ ಪೀಡಿತ ಮನೆಗಳಿಗೆ ಭೇಟಿ ನೀಡಿದ ರೆಡ್ ಕ್ರಾಸ್ ಸಂಸ್ಥೆಯ ಸದಸ್ಯರು, ಸಂತ್ರಸ್ತರ ಸಂಕಷ್ಟ ಆಲಿಸಿದರು. ಅಲ್ಲದೆ ಈ ಗಂಭೀರ ಪರಿಸ್ಥಿತಿಗೆ ಯಾರು ಧೃತಿಗೆಡಬಾರದು, ಒಳ್ಳೆಯ ದಿನಗಳು ಬರಲಿವೆ ಎಂದು ಧೈರ್ಯ ತುಂಬಿದರು.

ಈ ಸಂದರ್ಭದಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಬಾಗಲಕೋಟೆ ಜಿಲ್ಲಾ ಘಟಕದ ಚೇರ್​ಮನ್​ ಆನಂದ ಜಿಗಜಿನ್ನಿ ಮಾತನಾಡಿ, ಬಾಗಲಕೋಟೆ ಜಿಲ್ಲೆಯಲ್ಲಿ ಪ್ರವಾಹದಿಂದ ಭಾರಿ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ. ಸಾವಿರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ನೋವಿನಲ್ಲಿದ್ದವರಿಗೆ ಸಹಾಯ ಹಸ್ತ ಚಾಚುವ ರೆಡ್ ಕ್ರಾಸ್ ಸಂಸ್ಥೆಯು ಪ್ರವಾಹ ಬಂದಾಗಿನಿಂದ ಜಿಲ್ಲೆಯ ವಿವಿಧ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಹಾರ ಕೇಂದ್ರದಲ್ಲಿರುವ ನೆರೆ ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ನೀಡುತ್ತಿದೆ ಎಂದರು.

ವಿಶೇಷವಾಗಿ ತುಮಕೂರು ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯು ಸಂತ್ರಸ್ತರಿಗಾಗಿ ವಿವಿಧ ಅಗತ್ಯ ವಸ್ತುಗಳ ಸಂಗ್ರಹಿಸಿ ಕಿಟ್ ಸಿದ್ಧಪಡಿಸಿ ಬಾಗಲಕೋಟೆಗೆ ರವಾನೆ ಮಾಡಿದೆ. ಆ ಎಲ್ಲ ಕಿಟ್‍ಗಳನ್ನು ಬುದ್ನಿ ಬಿ.ಕೆ. ಗ್ರಾಮದ ಸಂತ್ರಸ್ತರಿಗೆ ನೀಡಲಾಗುತ್ತಿದೆ. ರೆಡ್ ಕ್ರಾಸ್ ಸಂಸ್ತೆಯು ತುಮಕೂರಿನಲ್ಲಿ ನಡೆಸುತ್ತಿರುವ ಅಂಧ, ಕಿವುಡ, ಮೂಗ ಮಕ್ಕಳ ಶಾಲೆಯ ವಿದ್ಯಾರ್ಥಿಗಳು ಈ ಕಿಟ್ ತಯಾರು ಮಾಡಿದ್ದಾರೆ. ನಿಜಕ್ಕೂ ಇದೊಂದು ಅಪರೂಪದ ಕ್ಷಣ. ನೋವಿನಲ್ಲಿದ್ದವರು ಮತ್ತೊಬ್ಬರ ನೋವಿಗೆ ಸ್ಪಂದಿಸಿರುವುದು ಸಾರ್ಥಕ ಭಾವನೆಗಳನ್ನು ಉಂಟು ಮಾಡಿದೆ. ಇನ್ನು ರೆಡ್ ಕ್ರಾಸ್ ಸಂಸ್ಥೆಯ ಜತೆ ಇನ್ಫೋಸಿಸ್, ಐಬಿಎಂ, ಪಿಣ್ಯ ಜಮ್‍ಖಾನ್, ಲಾಯನ್ಸ್ ಕ್ಲಬ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಕೈ ಜೋಡಿಸಿದ್ದು, ಸಂಗ್ರಹಿಸಿ ಕೊಟ್ಟ ವಿವಿಧ ವಸ್ತುಗಳನ್ನು ರೆಡ್ ಕ್ರಾಸ್ ಸಂಸ್ಥೆ ಮೂಲಕ ವಿತರಿಸಲಾಗಿದೆ ಎಂದು ತಿಳಿಸಿದರು.

ABOUT THE AUTHOR

...view details