ಬಾಗಲಕೋಟೆ:ವಿಶ್ವ ಏಡ್ಸ್ ದಿನದ ಅಂಗವಾಗಿ ಇಂದು ಬಾಗಲಕೋಟೆ ನವನವಗರದಲ್ಲಿ ಮಾರಣಾಂತಿಕ ಕಾಯಿಲೆ ಕುರಿತು ಜನರಲ್ಲಿ ವಿಶೇಷ ಜಾಥಾ ಮೂಲಕ ಜಾಗೃತಿ ಮೂಡಿಸಲಾಯ್ತು.
ಆರೋಗ್ಯ ಇಲಾಖೆ,ಕೆಸಾಪ್ ಸೇರಿದಂತೆ ಇತರ ಸಂಸ್ಥೆಗಳಿಂದ ಜಾಥಾ,ಜಾನಪದ ಶೈಲಿ ಗೀ ಗೀ ಪದಗಳ ಮೂಲಕ ಹಾಗೂ ಆಶಾ ಕಾರ್ಯಕರ್ತರು ಸೇರಿದಂತೆ ಇತರ ಮಹಿಳಾ ಸಂಘಟನೆಗಳಿಂದಲೂ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸಲಾಯ್ತು. ಈ ಜಾಥಾಗೆ ಶಾಸಕ ವೀರಣ್ಣ ಚರಂತಿಮಠ ಹಾಗೂ ಜಿಲ್ಲಾ ಪಂಚಾಯತ್ ಸಿಇಒ ಗಂಗೂಬಾಯಿ ಮಾನಕರ್ ಚಾಲನೆ ನೀಡಿದರು.
ಆರೋಗ್ಯ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿ ಡಾ.ಅನಿಲ್ ದೇಸಾಯಿ ಮಾತನಾಡಿ, ಕಳೆದ ಸಾಲಿನಿಂದ ಪ್ರಸಕ್ತ ಸಾಲಿಗೆ ಸಾಮಾನ್ಯರಲ್ಲಿ ಕಾಯಿಲೆ ಪೀಡಿತರ ಸಂಖ್ಯೆ ಶೇ.2.5 ರಿಂದ ಶೇ.2.2ಕ್ಕೆ ಇಳಿಮುಖವಾದರೆ, ಗರ್ಭಿಣಿಯರಲ್ಲಿ ಶೇ.0.085 ರಿಂದ ಶೇ.0.082 ಕ್ಕೆ ಇಳಿಮುಖವಾಗಿರುವುದು ಕಂಡುಬಂದಿದೆ ಎಂದ್ರು.
ಜಿಲ್ಲೆಯಲ್ಲಿ ಒಟ್ಟು 3 ಲೈಂಗಿಕ ರೋಗ ಪತ್ತೆ ಕೇಂದ್ರಗಳಿದ್ದು (ಸುರಕ್ಷಾ ಕ್ಲಿನಿಕ್) ಇವುಗಳ ಅಡಿಯಲ್ಲಿ ಏಪ್ರಿಲ್ನಿಂದ ಅಕ್ಟೋಬರ್-2019ವರೆಗೆ ಒಟ್ಟು 6,810 ತಪಾಸಣೆ ಮಾಡಲಾಗಿ ಶೇ.62 ರಷ್ಟು ಪ್ರಗತಿ ಸಾಧಿಸಲಾಗಿದೆ. ಎಚ್ಐವಿ ಪೀಡಿತ ಹೆರಿಗೆಗೆ ಬಂದಿರುವ ಮಹಿಳೆಯರಿಂದ ಮಕ್ಕಳಿಗೆ ರೋಗ ಹರಡದಂತೆ ತಡೆಯಲು ಸಾಕಷ್ಟ ಶ್ರಮವಹಿಸಿ, ನೂರಕ್ಕೆ 99 ರಷ್ಟು ಸಾಧನೆ ಮಾಡಲಾಗಿದ್ದು ಹೆಮ್ಮೆಯ ಸಂಗತಿ ಎಂದು ಆರೋಗ್ಯ ಇಲಾಖೆಯ ವೈದ್ಯಾಧಿಕಾರಿ ಹಾಗೂ ಸ್ತ್ರೀ ರೋಗ ತಜ್ಞೆ ಡಾ.ಜಯಶ್ರೀ ಎಮ್ಮಿ ತಿಳಿಸಿದ್ರು.