ಬಾಗಲಕೋಟೆ: ಮುಂಗಾರು ಮಳೆ ಚುರುಕುಗೊಂಡ ಹಿನ್ನೆಲೆ ಹಾಗೂ ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ ಬಾಗಲಕೋಟೆ ಜಿಲ್ಲೆಯಲ್ಲಿ ನದಿಗಳು ಉಕ್ಕಿ ಹರಿಯುತ್ತಿವೆ. ಇದರಿಂದ ಪ್ರವಾಹ ಭೀತಿ ಎದುರಾಗಿದೆ.
ಕೃಷ್ಣಾ ನದಿ ತೀರದ ಗ್ರಾಮಗಳಿಗೆ ಪ್ರವಾಹ ಭೀತಿ ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆ ಕೃಷ್ಣಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಹಿಪ್ಪರಗಿ ಜಲಾಶಯದಲ್ಲಿ 1.32 ಲಕ್ಷ ಕ್ಯೂಸೆಕ್ ಒಳಹರಿವು ಇದ್ದು, ಅಷ್ಟೇ ಪ್ರಮಾಣದಲ್ಲಿ ಕೃಷ್ಣಾ ನದಿಗೆ ನೀರನ್ನು ಬಿಡುಗಡೆ ಮಾಡಲಾಗಿದೆ. ಇದರಿಂದ ಕೃಷ್ಣಾ ನದಿ ತೀರದ ಗ್ರಾಮಗಳಿಗೆ ಪ್ರವಾಹ ಭೀತಿ ಉಂಟಾಗಿದೆ.
ನೀರು ಬಿಡುಗಡೆ ಬಗ್ಗೆ ಹಿಪ್ಪರಗಿ ಜಲಾಶಯದ ಕಾರ್ಯಕಾರಿ ಅಭಿಯಂತರ ಕೆ.ಕೆ.ಜಾಲಿಬೇರಿ ಮಾಹಿತಿ ನೀಡಿದ್ದಾರೆ. ಕೃಷ್ಣಾ ನದಿ ಪಾತ್ರದ ಜನರು ಸುರಕ್ಷಿತ ತಾಣಗಳಿಗೆ ತೆರಳುವಂತೆ ಸೂಚನೆ ನೀಡಲಾಗಿದೆ. ಇತ್ತ ಘಟಪ್ರಭಾ ನದಿಗೆ 30 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಿದ ಪರಿಣಾಮ, ಮುಧೋಳ ತಾಲೂಕಿನ ನದಿ ತೀರದ ಗ್ರಾಮಗಳಿಗೂ ಪ್ರವಾಹ ಭೀತಿ ಎದುರಾಗಿದೆ ಎಂದರು.
ಕೆಲವೆಡೆ ಸೇತುವೆಗಳು ಜಲಾವೃತ:
ಮಿರ್ಜಿ-ಅಕ್ಕಿಮರಡಿ, ಮಹಾಲಿಂಗಪೂರ-ಯಾದವಾಡ, ನಂದಗಾಂವ-ಮಹಾಲಿಂಗಪೂರ, ಮುಧೋಳ-ಯಾದವಾಡ ಸೇತುವೆಗಳು ಮುಳುಗಡೆಯಾಗಿದ್ದು, ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಕೃಷ್ಣಾ ಮತ್ತು ಘಟಪ್ರಭಾ ನದಿಗೆ ಹೆಚ್ಚುವರಿ ನೀರು ಬಿಡುಗಡೆ ಹಿನ್ನೆಲೆ ಜಮೀನುಗಳಿಗೆ ನೀರು ನುಗ್ಗುತ್ತಿದೆ.
ಮಹಾರಾಷ್ಟ್ರ ಮತ್ತು ಬೆಳಗಾವಿ ಭಾಗದಲ್ಲಿ ಸುರಿಯುತ್ತಿರುವ ಮಳೆ ಹಿನ್ನೆಲೆ ಘಟಪ್ರಭಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಬರುತ್ತಿದೆ. ಇದರಿಂದ ಮುಧೋಳ ತಾಲೂಕಿನ 9 ಗ್ರಾಮಗಳ ಸಂಪರ್ಕ ಸೇತುವೆಗಳು ಜಲಾವೃತಗೊಂಡಿದ್ದು, ಸಂಪರ್ಕ ಕಡಿತವಾಗಿದೆ.
ನದಿ ಪಾತ್ರದ ಹೊಲ-ಗದ್ದೆಗಳಿಗೆ ನೀರು ನುಗ್ಗಿದ್ದು, ಕಬ್ಬು, ಮೆಕ್ಕೆಜೊಳ, ಅಲಸಂದಿ, ಹೆಸರು, ಜೋಳ ಬೆಳೆಗಳು ಜಲಾವೃತವಾಗಿವೆ. ಈ ಮಧ್ಯೆ ಮಾಚಕನೂರು ಗ್ರಾಮದ ಹೊಳೆ ಬಸವೇಶ್ವರ ದೇವಾಲಯ ಸಂಪೂರ್ಣ ಜಲಾವೃತವಾಗಿದೆ.
ನಿನ್ನೆ ದೇವಾಲಯಕ್ಕೆ ಸುತ್ತುವರೆದಿದ್ದ ನೀರು, ಇಂದು ಸಂಪೂರ್ಣ ದೇವಾಲಯ ಮುಳಗಡೆ ಆಗುವಂತೆ ಹೆಚ್ಚಿದೆ. ಇದರಿಂದ ಮುಧೋಳ ಹಾಗೂ ಜಮಖಂಡಿ ತಾಲೂಕಿನಲ್ಲಿ ನದಿ ಪಾತ್ರದ ಜನತೆ ಆತಂಕಗೊಂಡಿದ್ದಾರೆ.
ಓದಿ:ವರುಣಾರ್ಭಟಕ್ಕೆ ಕುಂದಾನಗರಿ ತತ್ತರ: ಕೊಚ್ಚಿ ಹೋದ ರಸ್ತೆ, ಬೆಳಗಾವಿ-ಗೋವಾ ಸಂಪರ್ಕ ಕಡಿತ