ಬಾಗಲಕೋಟೆ:ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕಡಿಮೆ ಆಗಿದ್ದರೂ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣಾ ನದಿ ತೀರದ ಜನರಲ್ಲಿ ಆತಂಕ ಎದುರಾಗಿದೆ. ಜಿಲ್ಲೆಯ ಜಮಖಂಡಿ ತಾಲೂಕಿನಲ್ಲಿ ಹರಿಯುತ್ತಿರುವ ಕೃಷ್ಣಾ ನದಿಗೆ 1.50 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿರುವ ಪರಿಣಾಮ ಪ್ರವಾಹ ಭೀತಿ ಎದುರಾಗಿದೆ.
ಮಹಾಮಳೆ: ಬಾಗಲಕೋಟೆ ಜಿಲ್ಲೆಯಲ್ಲಿ ಹೆಚ್ಚಿದ ಆತಂಕ!
ಜಮಖಂಡಿ ತಾಲೂಕಿನಲ್ಲಿ ಹರಿಯುತ್ತಿರುವ ಕೃಷ್ಣಾ ನದಿಗೆ 1.50 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿರುವ ಪರಿಣಾಮ ಪ್ರವಾಹ ಭೀತಿ ಎದುರಾಗಿದೆ. ಇನ್ನೂ ಮಳೆ ಪರಿಣಾಮ 2,576 ಮನೆಗಳು ಹಾನಿಗೊಂಡಿವೆ. 3 ಜಾನುವಾರು ಮತ್ತು ಓರ್ವ ವ್ಯಕ್ತಿ ಮೃತಪಟ್ಟಿರುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಜಮಖಂಡಿ ತಾಲೂಕಿನ ಮುತ್ತೂರ, ತುಬಚಿ ಗ್ರಾಮಗಳು ನಡುಗಡ್ಡೆ ಆಗಿದೆ. ನದಿಯಲ್ಲಿ ಜನರು ತಮ್ಮ ಜೀವ ಭಯದಲ್ಲೇ ಜಾನುವಾರುಗಳನ್ನು ಸಾಗಿಸುತ್ತಿರುವ ದೃಶ್ಯಗಳು ಸಾಮಾನ್ಯವಾಗಿ ಕಂಡು ಬರುತ್ತಿದೆ. ಒಂದೂವರೆ ತಿಂಗಳ ಅಂತರದಲ್ಲಿ ಮತ್ತೆ ಪ್ರವಾಹ ಭೀತಿ ಉಂಟಾಗಿದೆ. ತುಬಚಿಯಿಂದ ನಿತ್ಯ ಮುತ್ತೂರು ನಡುಗಡ್ಡೆಯಲ್ಲಿ ಇರುವ ಜಮೀನುಗಳಿಗೆ ಹೋಗುವ ಜನರು ಈಗ ಮತ್ತೆ ಪರದಾಡುವಂತಾಗಿದೆ.
2,576 ಮನೆಗಳಿಗೆ ಹಾನಿ:ಜಿಲ್ಲೆಯಲ್ಲಿ ಕಳೆದ ಅಕ್ಟೋಬರ್ 10 ರಿಂದ 15 ರವರೆಗೆ ಸುರಿದ ಮಹಾ ಮಳೆಯಿಂದಾಗಿ ಒಟ್ಟು 2,576 ಮನೆಗಳು, 3 ಜಾನುವಾರು ಹಾಗೂ ಓರ್ವ ವ್ಯಕ್ತಿಯ ಜೀವ ಹಾನಿಯಾಗಿರುವುದಾಗಿ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ. ರಾಜೇಂದ್ರ ತಿಳಿಸಿದ್ದಾರೆ. ಬಾಗಲಕೋಟೆ ತಾಲೂಕಿನಲ್ಲಿ 241, ಬಾದಾಮಿ - 370, ಗುಳೇದಗುಡ್ಡ- 121, ಹುನಗುಂದ- 120, ಇಲಕಲ್ಲ- 113, ಜಮಖಂಡಿ- 271, ರಬಕವಿ - ಬನಹಟ್ಟಿ - 289, ಮುಧೋಳ 640, ಬೀಳಗಿ 140 ಸೇರಿ ಒಟ್ಟು 2,576 ಮನೆಗಳು ಹಾನಿಗೊಂಡಿವೆ. 3 ಜಾನುವಾರು ಮತ್ತು ಓರ್ವ ವ್ಯಕ್ತಿ ಮೃತಪಟ್ಟಿರುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.