ಬಾಗಲಕೋಟೆ:ನೋಡುವುದಕ್ಕೆ ಥೇಟ್ ರೈಲು ಬೋಗಿಯಂತೆ ಕಾಣುವ ಈ ಶಾಲಾ ಕೊಠಡಿ ಸಿದ್ಧವಾಗಿರುವುದು ಬಾಗಲಕೋಟೆ ನಗರದ ಶಾಸಕರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ನಂ 4ರಲ್ಲಿ. ನಗರದ ಪೇಂಟ್ ಮಾಲೀಕ ಅಶೋಕ ಜಾಲವಾದಿ ಅವರ ಪರಿಶ್ರಮದಿಂದ ಅತ್ಯಂತ ಆಕರ್ಷಕವಾಗಿ ಕಾಣುತ್ತಿರುವ ಈ ಶಾಲಾ ಕೊಠಡಿ ಮಕ್ಕಳನ್ನು ಸೆಳೆಯುವ ಪ್ರಮುಖ ಕೇಂದ್ರಬಿಂದುವಾಗಿದೆ.
ಹೀಗೆ ಉದ್ದವಾದ ರೈಲಿನ ಆಕಾರದಲ್ಲಿರುವ ಸರ್ಕಾರಿ ಶಾಲೆ. ಶಾಲೆಯ ಪಕ್ಕದಲ್ಲೇ ನಿಂತಿರುವ ಬಸ್ನಂತೆ ಕಾಣುವ ಮತ್ತೊಂದು ಕೊಠಡಿ. ಇವುಗಳ ಮಧ್ಯೆ ಆಕರ್ಷಣೆಯಾಗುತ್ತಿರುವ ಮೆಟ್ರೋ ರೈಲಿನ ಕಟ್ಟಡ. ಈ ರೀತಿ ದೃಶ್ಯ ಕಂಡು ಬಂದಿದ್ದು, ಬಾಗಲಕೋಟೆಯ ಸರ್ಕಾರಿ ಶಾಲೆಯಲ್ಲಿ.
ನಗರದ ಶಾಸಕರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ನಂ 4ರಲ್ಲಿ ಕಲರ್ ಫುಲ್ ಆಗಿ ಪೇಂಟಿಂಗ್ ಮಾಡಲಾಗಿದೆ. ಇಡೀ ಶಾಲೆಯ ತರಗತಿಗಳನ್ನು ರೈಲು, ಬಸ್ ಮತ್ತು ಮೆಟ್ರೋ ಆಕಾರದಲ್ಲಿ ಪೇಂಟಿಂಗ್ ಮಾಡಲಾಗಿದೆ. ಮಕ್ಕಳು ತರಗತಿಗೆ ಹೋದರೆ ಸಾಕು ರೈಲು ಬೋಗಿಯೊಳಗೆ ಹೋದಂತೆ ಭಾಸವಾಗುತ್ತದೆ. ಒಂದೆಡೆ ಇಂಜಿನ್, ಮತ್ತೊಂದೆಡೆ ಭೋಗಿಗಳು, ಬಾಗಿಲು, ಕಿಟಕಿಗಳು ಮತ್ತು ಕಂಪೌಂಡ್ ಮೇಲಿರುವ ಕಲಿಕೆ ಪೇಂಟಿಂಗ್ ವರ್ಣರಂಜಿತವಾಗಿ ಕಾಣ ಸಿಗುತ್ತವೆ. ಹೀಗಾಗಿ ಈ ಶಾಲೆಗೆ ಕೋವಿಡ್ ಮಧ್ಯೆಯೂ ಈ ಬಾರಿ 1ನೇ ತರಗತಿಗೆ 60ಕ್ಕೂ ದಾಖಲಾಗಿದ್ದು, ಒಟ್ಟು 260ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ.