ಬಾಗಲಕೋಟೆ: ಹಿಜಾಬ್ ವಿಷಯದಲ್ಲಿ ಸ್ಪಷ್ಟ ನಿರ್ಧಾರವಾಗಿಲ್ಲ. ಇದು ತ್ರಿಸದಸ್ಯ ಇಲ್ಲವೇ ಪಂಚ ಸದಸ್ಯ ಪೀಠಕ್ಕೆ ಹೋಗುವ ಸಂದರ್ಭವಿದೆ. ಅಲ್ಲಿಯವರೆಗೆ ಹೈಕೋರ್ಟ್ ಆದೇಶ ಚಾಲ್ತಿಯಲ್ಲಿರುತ್ತದೆ. ಶಾಲೆಯ ಒಳಗೆ ಹಿಜಾಬ್ ಹಾಕಬಾರದು ಎಂಬ ಸರ್ಕಾರದ ಆದೇಶ ಮುಂದುವರೆಯುತ್ತದೆ. ಶಾಲೆಯ ಒಳಗೆ ಹಿಜಾಬ್ ತೆಗೆದಿಟ್ಟು ಶಾಲೆ ಪ್ರವೇಶಿಸುವ ನಮ್ಮ ನಿಲುವಿಗೆ ಯಾವುದೇ ಧಕ್ಕೆ ಬಂದಿಲ್ಲ ಎಂದು ಉಡುಪಿ ಶಾಸಕ ರಘುಪತಿ ಭಟ್ ಹೇಳಿದರು.
ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಬಂದಂತಹ ತೀರ್ಪಿನಲ್ಲಿ ಎರಡು ಅಭಿಪ್ರಾಯಗಳು ಬಂದಿವೆ. ಈ ಎರಡು ಅಭಿಪ್ರಾಯಗಳಲ್ಲಿ ಒಬ್ಬರು ಹೈಕೋರ್ಟ್ ಆದೇಶ ಎತ್ತಿ ಹಿಡಿದಿದ್ದು, ಇನ್ನೊಬ್ಬರು ಕೆಲವು ಕಾರಣಗಳನ್ನು ಕೊಟ್ಟು ಅವರ ಆದೇಶದಲ್ಲಿ ಕೆಲವು ಹಳ್ಳಿಯ ಭಾಗದಲ್ಲಿ ಹೆಣ್ಣು ಮಕ್ಕಳ ವಿದ್ಯಾಭ್ಯಾಸ ಮುಂದುವರೆಸಲು ಹಿಜಾಬ್ ಬೇಕು ಎಂದು ವಾದ ಮಂಡಿಸಿದ್ದಾರೆ.
ಇದನ್ನೂ ಓದಿ:ಹಿಜಾಬ್ ವಿವಾದ: ಸುಪ್ರೀಂ ಕೋರ್ಟ್ ಪೀಠದಿಂದ ಭಿನ್ನ ತೀರ್ಪು, ಯಥಾಸ್ಥಿತಿ ಮುಂದುವರಿಕೆ