ಬಾಗಲಕೋಟೆ: ಭೋವಿ ಸಮುದಾಯದ ಬಡವರಿಗೆ ಜೀವನಾಂಶ ಘೋಷಣೆ ಮಾಡುವಂತೆ ಬಾಗಲಕೋಟೆಯ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.
ಬೆಂಗಳೂರಿನ ಮುಖ್ಯಮಂತ್ರಿ ನಿವಾಸಕ್ಕೆ ಭೇಟಿ ನೀಡಿದ ಸ್ವಾಮೀಜಿ, ಕೊರೊನಾ ಭೀತಿಯಿಂದ ದೇಶದಲ್ಲಿ ಲಾಕ್‍ಡೌನ್ ಘೋಷಣೆ ಮಾಡಿದ್ದರಿಂದ ಹಲವು ಸಮಸ್ಯೆಗಳು ಸೃಷ್ಟಿಯಾಗಿವೆ. ಸಮಸ್ಯೆಗಳನ್ನು ಸರಿದೂಗಿಸಲು ರಾಜ್ಯ ಸರ್ಕಾರ ಕೆಲವರಿಗೆ ಜೀವನಾಂಶ ಘೋಷಿಸಿದೆ. ಅಲೆಮಾರಿಗಳಾಗಿ ವಲಸೆ ಜೀವನ ನಡೆಸುತ್ತಿರುವ ಬಡ ಭೋವಿ ಜನಾಂಗದ ಕುಟುಂಬಗಳಿಗೂ ಜೀವನಾಂಶ ಮಂಜೂರು ಮಾಡಿ ಎಂದು ಮನವಿ ಸಲ್ಲಿಸಿದರು.
ರಸ್ತೆ ಕಾಮಗಾರಿ, ಕಾಫಿ ಎಸ್ಟೇಟ್, ಕೇಬಲ್, ಚೆಕ್ ಡ್ಯಾಂ ನಿರ್ಮಾಣ, ರೈಲ್ವೆ ಕಾಮಗಾರಿ, ಕೆರೆ ಕಟ್ಟೆ ದುರಸ್ತಿ ಸೇರಿ ಹತ್ತು - ಹಲವು ಕೆಲಸ ನಿರ್ವಹಿಸುವ ಸಮುದಾಯದ ಬಂಧುಗಳು ವರ್ಷದಲ್ಲಿ ಒಂದು ತಿಂಗಳು ಸಹ ಊರಲ್ಲಿ ಇರುವುದಿಲ್ಲ. ಸದಾ ಒಂದೆಡೆಯಿಂದ ಮತ್ತೊಂದೆಡೆ ವಲಸೆ ಹೋಗುತ್ತಾರೆ. ಇಂತಹವರು ಇದೀಗ ತೀವ್ರವಾಗಿ ಸಮಸ್ಯೆಗೆ ಸಿಲುಕಿದ್ದಾರೆ ಎಂದು ಸ್ವಾಮೀಜಿ ಸಿಎಂಗೆ ಮನವರಿಕೆ ಮಾಡಿಕೊಟ್ಟರು.