ಬಾಗಲಕೋಟೆ:ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ಜಿಲ್ಲಾಡಳಿತ ಭವನದಲ್ಲಿಂದು ಆಶಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಮಾಸಿಕ ಗೌರವಧನವನ್ನು 12000 ರೂ. ನಿಗದಿ ಮಾಡಿ, ಅಗತ್ಯ ಸುರಕ್ಷಾ ಸಾಮಗ್ರಿಗಳನ್ನು ವಿತರಿಸಿ ಎಂದು ಘೊಷಣೆ ಹಾಕಿ ಪ್ರತಿಭಟಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾಕಾರರಾದ ಶೈನಾಜ ಝಂಗಿ ಮಾತನಾಡಿ, ಗೌರವಧನ ಹಾಗೂ ಪ್ರೋತ್ಸಾಹ ಧನ ಎಂದು ಒಟ್ಟಿಗೆ 8 ಸಾವಿರ ರೂಪಾಯಿ ವೇತನ ನೀಡಲಾಗುತ್ತದೆ. ಇದರ ಬದಲಾಗಿ, 12,000 ರೂ.ಗಳನ್ನು ಪ್ರತಿ ತಿಂಗಳು ನೀಡಬೇಕು ಎಂದು ಒತ್ತಾಯಿಸಿದರು.
ಸೋಂಕಿತರ ನಡುವೆ ದಿನ ನಿತ್ಯವೂ ಕೆಲಸ ಮಾಡುವ ಆಶಾ ಕಾರ್ಯಕರ್ತೆಯರ ಆರೋಗ್ಯ ರಕ್ಷಣೆಯು ಸರ್ಕಾರದ ಜವಾಬ್ದಾರಿಯಾಗಿದೆ. ಆದರೆ, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಈ ಕಾರ್ಯಕರ್ತೆಯರಿಗೆ ಅಗತ್ಯವಾಗಿ ಬೇಕಾದಷ್ಟು ಮಾಸ್ಕ್, ಫೇಸ್‍ಶೀಲ್ಡ್, ಹ್ಯಾಂಡ್ ಗ್ಲೌಸ್, ಸ್ಯಾನಿಟೈಜರ್ ಇತ್ಯಾದಿಗಳನ್ನು ನೀಡಲಾಗಿಲ್ಲ. ಹಾಗಾಗಿ ಅವರೆಲ್ಲರೂ ಮುಖಕ್ಕೆ ಕರವಸ್ತ್ರವನ್ನು ಕಟ್ಟಿಕೊಂಡು ಸೋಂಕಿತರ ನಡುವೆ ಕೆಲಸ ಮಾಡುತ್ತಿದ್ದಾರೆ. ಪರಿಣಾಮ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅವರು ಸೋಂಕು ತಗುಲಿಸಿಕೊಂಡು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.
ಸರ್ಕಾರವೇ ಅಂದಾಜು ಮಾಡಿರುವಂತೆ ಈ ಮುಂದಿನ ದಿನಗಳಲ್ಲಿ ಸೋಂಕು ಇನ್ನೂ ವ್ಯಾಪಕವಾಗಿ ಹರಡುವ ಸಾಧ್ಯತೆ ಹೆಚ್ಚು ಇರುವುದರಿಂದ, ಪ್ರತಿ ದಿನವೂ ಜನರೊಂದಿಗೆ ಬೆರೆತು ಕೆಲಸ ಮಾಡುವ ಆಶಾ ಕಾರ್ಯಕರ್ತೆಯರು ಹೆಚ್ಚು ಸೋಂಕಿಗೆ ಬಲಿಯಾಗುವ ಸಾಧ್ಯತೆ ಇದೆ. ಹಾಗಾಗಿ ಕೊರೊನಾ ಸೋಂಕು ನಿಯಂತ್ರಿಸಲು ಅಮೂಲ್ಯವಾದ ಸೇವೆ ಸಲ್ಲಿಸುತ್ತಿರುವ ಆಶಾಕಾರ್ಯಕರ್ತೆಯರ ಆರೋಗ್ಯವನ್ನು ರಕ್ಷಿಸುವ ಎಲ್ಲಾ ರಕ್ಷಣಾ ಸಾಮಗ್ರಿಗಳನ್ನು ಸಾಕಷ್ಟು ಪ್ರಮಾಣದಲ್ಲಿ ನೀಡಬೇಕೆಂದು ಒತ್ತಾಯಿಸಿದರು.
ಕಳೆದ ಮಾರ್ಚ್ ನಿಂದ ಹಲವು ಬಾರಿ ರಾಜ್ಯವ್ಯಾಪ್ತಿಯಲ್ಲಿ ಹೋರಾಟ ಮಾಡಿ 7 ಬಾರಿ ಮನವಿ ಪತ್ರ ಸಲ್ಲಿಸಿದ್ದರೂ ಸಮಸ್ಯೆ ಪರಿಹಾರವಾಗಿಲ್ಲ. ಹಿಂದಿನ ಸಮಸ್ಯೆಗಳ ಜೊತೆಗೆ ಇದೀಗ ಕೊರೊನಾ ಸಂಬಂಧಿಸಿದಂತೆ ಇನ್ನಷ್ಟು ಸಮಸ್ಯೆಗಳು ಸೇರಿ ಕಾರ್ಯಕರ್ತೆಯರ ಬದುಕು ಅಸಹನೀಯವಾಗಿದೆ. ಹಾಗಾಗಿ ಸಮಸ್ಯೆ ಪರಿಹಾರಕ್ಕಾಗಿ ಮತ್ತೆ ಹೋರಾಟಕ್ಕೆ ಇಳಿಯುವುದು ಅನಿವಾರ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಬಗ್ಗೆ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳದಿದ್ದರೆ, ಮುಂಬರುವ ದಿನಗಳಲ್ಲಿ ಉಗ್ರ ಸ್ವರೂಪದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ, ವಿವಿಧ ಬೇಡಿಕೆ ಇರುವ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದಾರೆ.