ಬಾಗಲಕೋಟೆ: ಗೋ ಸಂತತಿಯನ್ನು ರಕ್ಷಿಸಿ, ಪೋಷಿಸಬೇಕು. ಗೋಪೂಜೆ, ಗೋಗ್ರಾಸ ಅತ್ಯಂತ ಶ್ರೇಷ್ಠ ಹಾಗೂ ಪವಿತ್ರ ಎಂದು ಉಡುಪಿ ಶ್ರೀ ಪೇಜಾವರ ಮಠದ ಕಿರಿಯ ಯತಿಗಳಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಹೇಳಿದ್ದಾರೆ.
ನವನಗರದ 7ನೇ ಸೆಕ್ಟರ್ನಲ್ಲಿರುವ ಅಖಿಲ ಭಾರತ ಮಧ್ವ ಮಹಾಮಂಡಳದ ಶ್ರೀಕೃಷ್ಣಮಠದಲ್ಲಿ ಭಕ್ತರನ್ನು ಅನುಗ್ರಹಿಸಿ ಸಂದೇಶ ನೀಡಿದ ಅವರು, ಗೋಪಾಲಕರು ಗೋಪಾಲ ಕೃಷ್ಣ ಇದ್ದಂತೆ. ಅವರನ್ನು ಅಷ್ಟೆ ಗೌರವಿಸಬೇಕು. ಗೋ ಸಂತತಿ ನಶಿಸಿ ಹೋಗಬಾರದು. ಅದು ಅತ್ಯಂತ ಪವಿತ್ರವಾಗಿ ಬೆಳೆಯಬೇಕು. ಅದರ ಪೋಷಣೆ ಹಾಗೂ ಸಂತತಿ ವೃದ್ಧಿಯಲ್ಲಿ ಪರಮಾತ್ಮನ ಸೇವೆ ಅಡಗಿದೆ ಎಂದು ಹೇಳಿದರು.
ಅಖಿಲ ಭಾರತ ಮಧ್ವ ಮಹಾಮಂಡಳದ ಶ್ರೀಕೃಷ್ಣಮಠ ನವಗ್ರಹ ಪೂಜೆಯಂತಹ ವಿಶೇಷ ಪೂಜೆಗಳಲ್ಲಿ ಅರ್ಪಿಸಲಾಗುವ ಧಾನ್ಯವನ್ನು ಗೋವಿಗೆ ಸಮರ್ಪಣೆ ಮಾಡಿದರೆ ಅದು ಶ್ರೇಷ್ಠ. ಗೋವಿನ ಪೂಜೆಯಲ್ಲಿ ಎಲ್ಲವೂ ಅಡಗಿದೆ. ಅದು ನೆಮ್ಮದಿ ನೀಡಬಲ್ಲ ಅತ್ಯಂತ ಶ್ರೇಷ್ಟ ಪೂಜೆ. ಭಗವದ್ಗೀತೆಯ ಪ್ರತಿ ಅಂಶಗಳು ಇಂದಿಗೂ ಪ್ರಸ್ತುತ. ಅದು ಸಮಾಜದ ಒಳಿತನ್ನು ಬಯಸಿದ ಶ್ರೇಷ್ಠ ಮಾಧ್ಯಮ ಎಂದು ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಬಣ್ಣಿಸಿದರು.
ಪಂ.ಬಿಂದುಚಾರ್ಯ ನಾಗಸಂಪಗಿ, ಡಾ.ರಘೋತ್ತಮಾಚಾರ್ಯ ನಾಗಸಂಪಗಿ, ಪಂ.ಬಿ.ಎನ್. ಶ್ರೀನಿವಾಸಾಚಾರ್ಯ, ಪಂ.ಪಿ.ಆರ್. ಜೋಶಿ, ಶ್ರೀ ಕೃಷ್ಣ ಮಠದ ವ್ಯವಸ್ಥಾಪಕ ಸಂತೋಷ ಗದ್ದನಕೇರಿ, ನವೀನಾಚಾರ್ಯ ಜೋಶಿ ಮತ್ತಿತರರು ಉಪಸ್ಥಿತರಿದ್ದರು. ನೂರಾರು ಭಕ್ತರು ಶ್ರೀಗಳ ದರ್ಶನ ಪಡೆದು ಫಲ ಮಂತ್ರಾಕ್ಷತೆ ಸ್ವೀಕರಿಸಿದರು.