ಬಾಗಲಕೋಟೆ:ಜನರ ಕಷ್ಟಗಳನ್ನು ಆಲಿಸುವ ಪ್ರಧಾನಿಗಳನ್ನು ನೋಡಿದ್ದೇವೆ. ಆದರೆ ಇದೇ ಮೊದಲ ಬಾರಿಗೆ ತಮನ್ನು ನಿಂದಿಸುತ್ತಿದ್ದಾರೆ ಅಂತಾ ಜನರೆದರು ತಮ್ಮ ಕಷ್ಟಗಳನ್ನು ಹೇಳಿಕೊಂಡ ಪ್ರಧಾನಿಯನ್ನು ನೋಡುತ್ತಿದ್ದೇವೆ ಎಂದು ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಲೇವಡಿ ಮಾಡಿದರು.
ಜಮಖಂಡಿ ಪಟ್ಟಣದ ಪೋಲೋ ಮೈದಾನದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಆನಂದ ನ್ಯಾಮಗೌಡರ ಪರ ಪ್ರಚಾರದ ಅಂಗವಾಗಿ ಹಮ್ಮಿಕೊಂಡ ಬಹಿರಂಗ ಸಮಾವೇಶದಲ್ಲಿ ಮೋದಿ ಮತ್ತು ಬಿಜೆಪಿ ವಿರುದ್ಧ ಪ್ರಿಯಾಂಕಾ ಗಾಂಧಿ ಕಿಡಿಕಾರಿದರು.
ಬಹಳಷ್ಟು ಪ್ರಧಾನಿಗಳನ್ನು ನೋಡಿದ್ದೇನೆ. ಇಂದಿರಾಗಾಂಧಿ ದೇಶಕ್ಕಾಗಿ ಗುಂಡು ಹಾಕಿಸಿಕೊಂಡರು, ರಾಜೀವ್ ಗಾಂಧಿ ಪ್ರಾಣ ತ್ಯಾಗ ಮಾಡಿದರು. ಆದರೆ ಇದೇ ಮೊದಲ ಬಾರಿಗೆ ಪ್ರಧಾನಿ ಅವರು ಜನರ ಸಮಸ್ಯೆ ಬಗೆಹರಿಸುವ ಬದಲು ತಾವೇ ತಮ್ಮ ಸಮಸ್ಯೆ ಹೇಳಿಕೊಳ್ಳುತ್ತಿದ್ದಾರೆ. ಜನರ ಸಮಸ್ಯೆ ಬಗ್ಗೆ ಮೋದಿ ಅವರ ಕಚೇರಿಯಲ್ಲಿ ಪಟ್ಟಿ ಕೂಡ ಮಾಡುವುದಿಲ್ಲ. ಬದಲಾಗಿ ನನ್ನ ಎಷ್ಟು ಸಲ ಬೈದಿದ್ದಾರೆ ಅಂತ ಲಿಸ್ಟ್ ಮಾಡುತ್ತಾರೆ. ಇವರಿಗೆ ಬೈದಿದ್ದನ್ನು ನೋಡಿದ್ರೆ ಒಂದು ಪುಟ ಕೂಡ ತುಂಬಲ್ಲ. ಆದ್ರೆ ಗಾಂಧಿ ಕುಟುಂಬವನ್ನು ನಿಂದಿಸಿದ್ದನ್ನು ಪಟ್ಟಿ ಮಾಡಿದ್ರೆ ಪುಸ್ತಕಗಳ ಮೇಲೆ ಪುಸ್ತಕ ಪ್ರಿಂಟ್ ಹಾಕಿಸಬೇಕಾಗುತ್ತದೆ. ನನ್ನ ಸಹೋದರನಿಂದ ಪ್ರಧಾನಿ ಮೋದಿ ಕಲಿಯಬೇಕಿದೆ. ಏಕೆಂದ್ರೆ ದೇಶದ ಜನರಿಗಾಗಿ ನನ್ನ ಸಹೋದರ (ರಾಹುಲ್) ಗಾಲಿ, ಗೋಲಿ (ಬೈಗುಳ ಮತ್ತು ಗುಂಡು) ತಿನ್ನಲು ಸಿದ್ಧನಿದ್ದೇನೆ ಅಂತಾರೆ, ಆದ್ರೆ ಮೋದಿ ಅವರು ನಿಂದನೆಗೆ ಹೆದರುತ್ತಿದ್ದಾರೆ. ಮೋದಿಯವರೇ ಹೆದರಬೇಡಿ. ಸಾರ್ವಜನಿಕ ಜೀವನದಲ್ಲಿ ಇವೆಲ್ಲ ಸಾಮಾನ್ಯ ಎಂದು ಪ್ರಿಯಾಂಕಾ ಲೇವಡಿ ಮಾಡಿದರು.
ಬಿಜೆಪಿ ವಿರುದ್ಧ ವಾಗ್ದಾಳಿ ಮುಂದುವರಿಸಿದ ಕೈ ನಾಯಕಿ, ಮೋಸದಿಂದ ಅಧಿಕಾರಕ್ಕೆ ಬಂದಿರುವ ರಾಜ್ಯ ಬಿಜೆಪಿ ಸರ್ಕಾರ, ಒಂದುವರೆ ಲಕ್ಷ ಕೋಟಿ ಹಣವನ್ನು ಲೂಟಿ ಮಾಡಿದೆ ಎಂದು ದೂರಿದರು. ರೈತರು ಎಷ್ಟೇ ಕಷ್ಟದಲ್ಲಿ ಇದ್ದರೂ ಬಿಜೆಪಿ ಸರ್ಕಾರ ರೈತರಿಗೆ ಯಾವುದೇ ಅನುಕೂಲ ಕಲ್ಪಿಸಲಿಲ್ಲ. ಹಣದುಬ್ಬರ ಹೆಚ್ಚಾಗಿದೆ, ಗ್ಯಾಸ್ ಬೆಲೆ ಏರಿದೆ. ಅಗತ್ಯ ವಸ್ತುಗಳ ಖರೀದಿಗೆ ಹಣ ಇಲ್ಲದಂತಾಗಿದೆ. ಆದರೂ ಸಹ ಮಹಿಳೆ ತಾನು ಧೈರ್ಯದಿಂದ ದುಡಿದು ಜೀವನ ಸಾಗಿಸುತ್ತಾ ಇದ್ದಾಳೆ. ಎರಡೂವರೆ ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ. ನೌಕರಿ ಕೊಡುವುದು ಸರ್ಕಾರದ ಕೆಲಸವಾಗಿದೆ. ಉದ್ಯೋಗ ಪಡೆಯುವುದು ನಿಮ್ಮ ಹಕ್ಕಾಗಿದೆ. ಕರ್ನಾಟಕದ ಯುವಕರು ಬುದ್ಧಿವಂತರು. ನಾಡಿನ ದೊಡ್ಡ ದೊಡ್ಡ ಕಂಪನಿಗಳಲ್ಲಿ ಕನ್ನಡದ ಯುವಕರಿದ್ದಾರೆ ಎಂದರು.