ಬಾಗಲಕೋಟೆ: "ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ನಾಡಿನ ದೊರೆಯಾಗುವ ಶಕ್ತಿ ಇದೆ. ಬರುವ ದಿನಗಳಲ್ಲಿ ಅವರಿಗೆ ಬೆಂಬಲವಾಗಿ ನಿಲ್ಲುತ್ತೇವೆ" ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು. ಬಾಗಲಕೋಟೆ ನವನಗರದ ಕಲಾ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಿಲ್ಲಾ ವಾಲ್ಮೀಕಿ ಜನಜಾಗೃತಿ ಸಮಾವೇಶದ ಸಾನಿಧ್ಯವಹಿಸಿ ಮಾತನಾಡಿದ ಅವರು, "ರಾಜ್ಯ ರಾಜಕೀಯದಲ್ಲಿ ಏನಾದರೂ ಬೆಳವಣಿಗೆಗಳು ನಡೆದರೆ ದಲಿತರೊಬ್ಬರು ರಾಜ್ಯದ ಮುಖ್ಯಮಂತ್ರಿಯಾಗಲಿ ಎಂಬ ಸ್ಪಷ್ಟ ಸಂದೇಶವನ್ನು ಕಳುಹಿಸೋಣ" ಎಂದು ಕರೆ ನೀಡಿದರು.
"ದಲಿತರು ವೋಟ್ ಬ್ಯಾಂಕ್ ಅಷ್ಟೇ ಆಗಬೇಕಾ?. ಚುನಾವಣೆ ಬಂದಾಗ ಈ ಸಮುದಾಯದ ಮತಗಳು ಬೇಕು, ಅಧಿಕಾರಕ್ಕೆ ಬಂದ ಮೇಲೆ ಈ ಸಮುದಾಯದ ಹಿತ ಬೇಡವೇ ನಿಮಗೆ. ಅವಕಾಶಗಳು ಸಿಕ್ಕರೆ ಯಾಕೆ ದಲಿತರು ಮುಖ್ಯಮಂತ್ರಿಯಾಗಬಾರದು. ಅದೇನು ಒಂದು ಜಾತಿಯ ಸ್ವತ್ತಾ?, ಅದನ್ನು ಗುತ್ತಿಗೆ ಹಿಡಿದುಕೊಂಡಿದ್ದಾರಾ?. ದಲಿತರು ಮುಖ್ಯಮಂತ್ರಿಯಾಗಲಿ ಎಂಬ ಔದರ್ಯ ಇಲ್ಲದಿದ್ದರೆ ಹೇಗೆ" ಎಂದು ಪ್ರಶ್ನಿಸಿದರು.
ಸಮಾವೇಶದ ಬಳಿಕ ಸಚಿವ ಸತೀಶ್ ಜಾರಕಿಹೊಳಿ, "ನಿಮಗೆ ನಾಡಿನ ದೊರೆಯಾಗುವ ಶಕ್ತಿ ಇದೆ ಎಂದು ಸ್ವಾಮೀಜಿ ಹೇಳಿಕೆ ನೀಡಿರುವ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿ, ಪ್ರಸನ್ನಾನಂದ ಸ್ವಾಮೀಜಿ ಹೇಳಿದ್ದಾರೆ ಮತ್ತು ಸಮಯಕ್ಕಾಗಿ ಕಾಯಬೇಕು ಎಂದೂ ಸಹ ಹೇಳಿದ್ದಾರೆ. ನಮ್ಮ ಸಮುದಾಯಕ್ಕೆ ಮತ್ತು ನಮಗೆ ಮುಖ್ಯಮಂತ್ರಿಯಾಗಬೇಕೆಂಬ ಆಸೆ ಇರಬಹುದು. ಆದರೆ ಪಕ್ಷ ದೊಡ್ಡದು, ಪಕ್ಷದ ತೀರ್ಮಾನ ಅಂತಿಮ" ಎಂದು ತಿಳಿಸಿದರು.