ಬಾಗಲಕೋಟೆ:ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕ್ಷೇತ್ರ ಬಾದಾಮಿ ತಾಲೂಕಿನ ಕುಳಗೇರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಅವ್ಯವಸ್ಥೆ ಆಗರವಾಗಿದೆ. ಒಂದರಿಂದ ಏಳನೇಯ ತರಗತಿ ಇರುವ ಈ ಶಾಲೆಯ ಕೊಠಡಿಗಳ ಛಾವಣಿ ಕುಸಿದು ಬಿದ್ದು, ಇಡೀ ಶಾಲೆ ಹಾಳಾಗಿದೆ.
ಕೊರೊನಾ ಹಿನ್ನೆಲೆ ಶಾಲೆಗೆ ರಜೆ ಇರುವುದರಿಂದ ಯಾವುದೇ ಅನಾಹುತ ನಡೆದಿಲ್ಲ ಎಂಬುವುದು ಸಮಾಧಾನಕರ ಸಂಗತಿ. ಆದರೆ ಕಳಪೆ ಕಾಮಗಾರಿಯಿಂದ ಇಂತಹ ಘಟನೆ ನಡೆದಿರುವ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುಮಾರು 35ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಈ ಶಾಲೆಯಲ್ಲಿ ನಾಲ್ವರು ಶಿಕ್ಷಕರು ಇದ್ದು, ಛಾವಣಿ ಕುಸಿದ ಪರಿಣಾಮ ಮಕ್ಕಳ ಕಲಿಕೆಗಾಗಿ ಇಟ್ಟಿರುವ ಕಂಪ್ಯೂಟರ್ ಹಾಗೂ ಇತರ ಸಾಮಗ್ರಿಗಳು ಹಾನಿಗೊಳಗಾಗಿವೆ. ಸರ್ಕಾರಿ ಶಾಲೆ ಅಂದರೆ ಮೂಗು ಮುರಿಯುವ ಇಂದಿನ ದಿನಮಾನದಲ್ಲಿ ಇಂತಹ ಕಳಪೆ ಕಾಮಗಾರಿಯಿಂದ ಇನ್ನಷ್ಟು ಅಪಹಾಸ್ಯ ಮಾಡಿದಂತಾಗುತ್ತದೆ.
ಕೊರೊನಾ ಭೀತಿಯಿಂದ ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂಜರಿಯುತ್ತಿದ್ದಾರೆ. ನವಂಬರ್ ತಿಂಗಳನಲ್ಲಿ ಶಾಲೆಗಳು ಪ್ರಾರಂಭ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ಆದರೆ ಇದಕ್ಕೂ ಮುನ್ನ ಸರ್ಕಾರ ಎಚ್ಚೆತ್ತುಕೊಂಡು ಇಂತಹ ಶಾಲೆಗಳ ದುರಸ್ತಿ ಕಾರ್ಯ ಮಾಡಬೇಕಾಗಿದೆ. ಜೊತೆಗೆ ಈ ರೀತಿಯಾಗಿ ಕಳಪೆ ಕಾಮಗಾರಿ ಮಾಡುವವರ ವಿರುದ್ಧ ಕ್ರಮ ಜರುಗಿಸಬೇಕಾಗಿದೆ.
ಇನ್ನು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಈ ಬಗ್ಗೆ ಗಂಭೀರ ಕ್ರಮ ತೆಗೆದುಕೊಂಡು ಅಧಿಕಾರಿಗಳಿಗೆ ಚಾಟಿ ಬೀಸಬೇಕಾಗಿದೆ.