ಬಾಗಲಕೋಟೆ : ಚಾಲುಕ್ಯರು ಆಳಿದ ನಾಡು, ಐತಿಹಾಸಿಕ ಬಾದಾಮಿ ಪಟ್ಟಣದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬಿಜೆಪಿ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ನಡೆಸಿದರು. ಬಾದಾಮಿ ಪಟ್ಟಣದ ಹೊರವಲಯದಲ್ಲಿರುವ ಬನಶಂಕರಿ ಲೇಔಟ್ನಲ್ಲಿ ಹಮ್ಮಿಕೊಂಡಿದ್ದ ನಾರಿ ಶಕ್ತಿ ನಾಡಿನ ಶಕ್ತಿ ಎಂಬ ಮಹಾ ಸಮಾವೇಶದಲ್ಲಿ ಭಾಗವಹಿಸಿ ನಾಡಿನ ಇತಿಹಾಸ, ಪ್ರವಾಸೋದ್ಯಮ, ಪಾರಂಪರಿಕ ವಸ್ತುಗಳ ಬಳಕೆ ಬಗ್ಗೆ ಭಾಷಣ ಮಾಡಿ ಗಮನ ಸೆಳೆದರು.
ಚಾಲುಕ್ಯರ ನಾಡಿನ ಸಹೋದರ, ಸಹೋದರಿಯರಿಗೆ ನಮಸ್ಕಾರಗಳು ಎಂದು ಕನ್ನಡದಲ್ಲಿ ಭಾಷಣ ಪ್ರಾರಂಭಿಸಿದ ಮೋದಿ, ಬೆಂಗಳೂರಿನಲ್ಲಿ ನಡೆದ ಅಭೂತಪೂರ್ವ ರೋಡ್ ಶೋ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮಹಿಳೆಯರು, ಹಿರಿಯರು ಹಾಗೂ ಮಕ್ಕಳು ಕೂಡ ರೋಡ್ ಶೋನಲ್ಲಿ ಭಾಗವಹಿಸಿದ್ದರು. ಕರ್ನಾಟಕ ಜನತೆಯ ಪ್ರೀತಿಗೆ ಅಭಾರಿ ಆಗಿದ್ದೇನೆ. ಕರ್ನಾಟಕ ಜನತೆ ಮಾತ್ರ ಇಂತಹ ಪ್ರೀತಿ ತೋರಿಸುತ್ತಿದ್ದಾರೆ. ಈ ಪ್ರೀತಿಯಿಂದ ಮತ್ತೊಮ್ಮೆ ಡಬಲ್ ಇಂಜಿನ್ ಸರ್ಕಾರ ಬರುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ ಅವರು, ಕಾಂಗ್ರೆಸ್ ಪಕ್ಷದ ಜಾತೀಯತೆ, ಮೀಸಲಾತಿಯಿಂದಾಗಿ, ಲಿಂಗಾಯತರನ್ನು ಒಡೆಯುವ ಕೆಲಸ ಮಾಡಿದೆ. ಸಿದ್ದರಾಮಯ್ಯನವರು ಬಾದಾಮಿಯಲ್ಲಿ ಸ್ಪರ್ಧೆ ಮಾಡಿ ಶಾಸಕರಾಗಿದ್ದಾರೆ. ಅವರು ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ ಎಂದು ಹೇಳುತ್ತಾರೆ. ಆದರೆ ಇಲ್ಲಿನ ಅಭಿವೃದ್ಧಿ ಮಾಡಿರುವುದು ಡಬಲ್ ಇಂಜಿನ್ ಸರ್ಕಾರ. ಹೃದಯ ಯೋಜನೆ, ಕಿಸಾನ್ ಸಮ್ಮಾನ್, ನೀರಾವರಿ ಯೋಜನೆ ಸೇರಿದಂತೆ ರಸ್ತೆ ಹಾಗೂ ಇತರ ಅಭಿವೃದ್ಧಿ ಕೆಲಸ ಮಾಡಿದ್ದು ಡಬಲ್ ಇಂಜಿನ್ ಸರ್ಕಾರ. ಆದರೆ ಸುಳ್ಳು ಹೇಳಿ ಸಿದ್ದರಾಮಯ್ಯನವರು ಕ್ಷೇತ್ರ ಬಿಟ್ಟು ಹೋಗಿದ್ದಾರೆ ಎಂದು ಟೀಕಿಸಿದರು.
ಬಿಜೆಪಿ ಸರ್ಕಾರ 29 ಲಕ್ಷ ಕೋಟಿ ಹಣವನ್ನು ನೇರವಾಗಿ ಜನ ಸಾಮಾನ್ಯರಿಗೆ ಮುಟ್ಟುವಂತೆ ಮಾಡಿದೆ. ಅದೇ ಕಾಂಗ್ರೆಸ್ ಸರ್ಕಾರ ಇದ್ದರೆ 24 ಲಕ್ಷ ಕೋಟಿ ಹಣವನ್ನು ಕಮಿಷನ್ ಆಗಿ ತಿನ್ನುತ್ತಿದ್ದರು. ಭಾರತ ದೇಶ ಮೊಬೈಲ್ ಫೋನ್ ತಯಾರಿಕೆಯಲ್ಲಿ ವಿಶ್ವದಲ್ಲೇ ಅಗ್ರಸ್ಥಾನಕ್ಕೇರಿದೆ. ಈ ಹಿಂದೆ 2 ಕಾರ್ಖಾನೆ ಮಾತ್ರ ಇದ್ದವು. ಈಗ 200 ಕಾರ್ಖಾನೆ ಇವೆ. ಇದರ ಜೊತೆಗೆ 2014 ರಲ್ಲಿ 300ರೂ. ಗೆ 1GB ಡೇಟಾ ಸಿಗುತ್ತಿತ್ತು. ಈಗ ಬಿಜೆಪಿ ಸರ್ಕಾರ ಬಂದ ಮೇಲೆ 10 ರೂ.ಗೆ 1GB ಸಿಗುತ್ತಿದೆ ಎಂದರು.
ಬಾದಾಮಿ, ಪಟ್ಟದಕಲ್ಲು, ಐಹೊಳೆ ಹಾಗೂ ಹಂಪಿ ಸೇರಿ ಇತರ ಐತಿಹಾಸಿಕ ಕೇಂದ್ರಗಳನ್ನು ಅಭಿವೃದ್ಧಿಪಡಿಸುವ ಕೆಲಸ ಮಾಡಲಾಗುತ್ತಿದೆ. ಈ ಮೂಲಕ ಯುವಕರಿಗೆ ಉದ್ಯೋಗ ಒದಗಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿದೆ. ಮುಂದೆಯೂ ಅಭಿವೃದ್ಧಿ ಮಾಡುತ್ತೇವೆ. ಬಾಗಲಕೋಟೆಯಲ್ಲಿ ಕಪ್ಪು ಮಣ್ಣು, ಕೆಂಪು ಮಣ್ಣಿನಲ್ಲಿ ಸಾಕಷ್ಟು ಬೆಳೆ ಬೆಳೆಯಲಾಗುತ್ತದೆ. ತೋಟಗಾರಿಕೆ ಬೆಳೆಗಳು ಸೇರಿದಂತೆ, ಇತರ ಬೆಳೆ ಬೆಳೆದ ರೈತರಿಗೆ ಅನುಕೂಲವಾಗುವಂತ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಕರ್ನಾಟಕ ಪೂರ್ಣ ಪ್ರಮಾಣದ ಬಹುಮತ ಬಿಜೆಪಿ ಪಕ್ಷದ ಸರ್ಕಾರ ನೀಡಿದಲ್ಲಿ, ಕರ್ನಾಟಕವನ್ನು ದೇಶದ ನಂಬರ್ ಒನ್ ರಾಜ್ಯ ಮಾಡುತ್ತೇವೆ ಎಂದು ಹೇಳಿದ್ರು.