ಬಾಗಲಕೋಟೆ:ಬೀಳಗಿ ತಾಲೂಕಿನ ಗಿರಿಸಾಗರ ಗ್ರಾಮದಲ್ಲಿ ಪರಸ್ಪರ ಸಗಣಿ ಎರಚುವ ಮೂಲಕ ಚಂಗಳಿಕೆವ್ವನ ಓಕುಳಿ ಆಚರಣೆ ಮಾಡುವ ಪದ್ಧತಿ ರೂಢಿಯಲ್ಲಿದೆ. ಈ ಓಕುಳಿ ಆಚರಣೆ ಮಾಡುವುದರಿಂದ ರೋಗ - ರುಜಿನಗಳು ನಿವಾರಣೆ ಆಗುತ್ತದೆ ಎಂಬ ನಂಬಿಕೆ ಇಲ್ಲಿನ ಗ್ರಾಮಸ್ಥರಲ್ಲಿದೆ. ಹೀಗಾಗಿ ಸಗಣಿ ಓಕುಳಿಯಾಡುವ ಮೂಲಕ ಚಂಗಳಿಕೆವ್ವಳಿಗೆ ಹರಕೆ ತೀರಿಸುತ್ತಾರೆ.
ಮೊದಲು ಗ್ರಾಮದ ಸಂಗಮೇಶ್ವರ ದೇಗುಲದ ಎದುರು, ಚಂಗಳಿಕೆವ್ವಳ ಎಂದು ದೇವಿಯ ಸ್ವರೂಪದಲ್ಲಿ ಪೂಜೆ ಪುನಸ್ಕಾರ ಮಾಡಿ, ಇಡೀ ಗ್ರಾಮದ ತುಂಬೆಲ್ಲಾ ಮೆರವಣಿಗೆ ಮಾಡುತ್ತಾರೆ.
ಸಗಣಿಯನ್ನು ಒಂದೆಡೆ ಕೂಡಿ ಹಾಕುತ್ತಾರೆ. ಪೂಜೆ ಬಳಿಕ, ಕೆಳಗಿನ ಓಣಿ ಮೇಲಿನ ಓಣಿ ಮಹಿಳೆಯರು ಸೇರಿಕೊಂಡು ಎರಡು ತಂಡ ರಚನೆ ಮಾಡುತ್ತಾರೆ. ಆಗ ಎರಡು ತಂಡಗಳ ಮಧ್ಯೆ ಪರಸ್ಪರ ಸಗಣಿ ಎರಚಾಟ ನಡೆಯುತ್ತದೆ. ಪುರುಷರ ಮೇಲೆಯೂ ಸಗಣಿ ಓಕುಳಿ ಎರಚುತ್ತಾರೆ.
ಹೀಗೆ ಸಗಣಿ ಎರಚಾಡುವುದು ದೇವಿ ಆರಾಧನೆ ಎಂದು ಗ್ರಾಮಸ್ಥರು ಸಂಭ್ರಮಿಸುತ್ತಾರೆ. ತಲ- ತಲಾಂತರದಿಂದ ಗಿರಿಸಾಗರದಲ್ಲಿ ಈ ಸಗಣಿ ಎರಚುವ ಓಕುಳಿ ಪದ್ಧತಿ ನಡೆದುಕೊಂಡು ಬಂದಿದೆ. ಪ್ರತಿ ವರ್ಷ ಇದನ್ನು ಆಚರಣೆ ಮಾಡಿದ್ರೆ ದೇವಿ ಒಲಿದು ಮಳೆ, ಬೆಳೆ ಚೆನ್ನಾಗಿ ಆಗುತ್ತದೆ ಜೊತೆಗೆ ಯಾವುದೇ ರೋಗ ರುಜಿನಗಳು ಹರಡದಂತೆ ದೇವಿ ಕಾಯುತ್ತಾಳೆ ಎಂಬುದು ಗ್ರಾಮಸ್ಥರ ನಂಬಿಕೆ.