ಬಾಗಲಕೋಟೆ :ರಾಜ್ಯಾದ್ಯಂತ ವಾರಾಂತ್ಯ ಕರ್ಫ್ಯೂ ಜಾರಿಯಾಗಿದೆ. ಈ ಹಿನ್ನೆಲೆ ನಗರದಲ್ಲಿ ಮದುವೆ ನಿಶ್ಚಯ ಮಾಡಿಕೊಂಡಿದ್ದ ಕುಟುಂಬಗಳು ಪರದಾಡಿರುವ ಘಟನೆ ನಡೆದಿದೆ.
ನಗರದಲ್ಲಿ ಈಗಾಗಲೇ ಶನಿವಾರ ಹಾಗೂ ರವಿವಾರ ಸುಮಾರು 25ಕ್ಕೂ ಹೆಚ್ಚು ಮದುವೆ ನಿಶ್ಚಯವಾಗಿದ್ದವು. ಕೆಲವರು ಮದುವೆ ದಿನ ಮುಂದೆ ಹಾಕಿದರೆ, ಇನ್ನು ಕೆಲವರು ಏನೇ ಆಗಲಿ, ಮದುವೆ ಮಾಡಿಯೇ ಸಿದ್ದ ಎಂದು ಎಲ್ಲ ತಯಾರಿ ಮಾಡಿಕೊಂಡಿದ್ದಾರೆ. ಆದರೆ, ಸರ್ಕಾರದ ಕೊರೊನಾ ನಿಯಮಾವಳಿಗಳನ್ನು ಅನುಸರಿಸುವಲ್ಲಿ ಸುಸ್ತಾಗಿ ಹೋಗಿದ್ದಾರೆ.
ಪರವಾನಿಗೆಗಾಗಿ ಅಲೆದಾಡಿದ ಕುರಿತು ಸಾರ್ವಜನಿಕರು ಅಭಿಪ್ರಾಯ ಹಂಚಿಕೊಂಡಿದ್ದಾರೆ.. ಸರ್ಕಾರದ ಆದೇಶದಂತೆಯೇ ನಗರದಲ್ಲಿ ಮದುವೆ ಮಾಡುತ್ತಿದ್ದಾರೆ. ಆದರೆ, ವಿವಾಹ ಸಮಾರಂಭಕ್ಕೆ ಪರವಾನಿಗೆ ಪತ್ರ ಪಡೆದುಕೊಳ್ಳಲು ಕುಟುಂಬದವರು ಹರಸಾಹಸ ಪಡುತ್ತಿದ್ದಾರೆ. ನಗರಸಭೆ, ಪೊಲೀಸ್ ಇಲಾಖೆ ಹಾಗೂ ತಹಶೀಲ್ದಾರ್ ಕಚೇರಿಗೆ ಅಲೆದು ಅಲೆದು ಸೋತು ಸುಣ್ಣವಾಗಿದ್ದಾರೆ.
ಶನಿವಾರದ ದಿನದಂದು ಅಂಬಾಜಿ ಗೌವಳಿ ಎಂಬುವರ ಕುಟುಂಬದವರು ಮನೆಯಲ್ಲಿ ಮದುವೆ ನಡೆಸಲು ಸಿದ್ಧತೆ ಮಾಡಿಕೊಂಡಿದ್ದು, ಕಾಳಿದಾಸ ಮಂಗಲ ಭವನದಲ್ಲಿ ಮದುವೆ ನಡೆಸಲು ಕಳೆದ ಆರು ತಿಂಗಳ ಹಿಂದೆಯೇ ನಿರ್ಧರಿಸಿದ್ದಾರೆ. ಆದರೀಗ ಕೊರೊನಾ ಹೆಚ್ಚಳ ಹಿನ್ನೆಲೆ ಆತಂಕಕ್ಕೊಳಗಾಗಿದ್ದಾರೆ.
ನಗರಸಭೆಯಿಂದ ಪರವಾನಿಗೆ ಪತ್ರ ಪಡೆದುಕೊಂಡಿದ್ದು, ಸರ್ಕಾರದ ಸೂಚನೆಯಂತೆ 50 ಜನರನ್ನು ಒಳಗೊಂಡು ಮದುವೆ ಮಾಡಲು ಸಿದ್ದತೆ ಮಾಡಿಕೊಂಡಿದ್ದಾರೆ.
ಆದರೆ, ಮನೆಯ ಕೆಲಸವನ್ನು ಬಿಟ್ಟು ಕೇವಲ ಪರವಾನಿಗೆ ಪತ್ರಕ್ಕಾಗಿಯೇ ತಿರುಗುವಂತಾಗಿದೆ. ಸರ್ಕಾರ ಒಂದೆಡೆಯೇ ಪರವಾನಿಗೆ ಪತ್ರ ವಿತರಿಸಲಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಓದಿ:ಅಂದು ಅಷ್ಟು ಪ್ರಚಾರ ಮಾಡಿದ್ರೂ ಬೇಡ ಅಂದವರು ಇಂದು ವ್ಯಾಕ್ಸಿನ್ಗೆ ಕ್ಯೂ: ಆದ್ರೆ ಆಸ್ಪತ್ರೆಯಲ್ಲಿ ಲಸಿಕೆ ಇಲ್ಲ !