ಬಾಗಲಕೋಟೆ: ಜಿಲ್ಲಾ ಉಸ್ತುವಾರಿ ಆದ ಬಳಿಕ ಪ್ರಥಮ ಬಾರಿಗೆ ಆಗಮಿಸಿದ ಸಚಿವ ಉಮೇಶ ಕತ್ತಿ ಅವರಿಗೆ ಬಿಜೆಪಿ ಪಕ್ಷದ ಕಚೇರಿಯಲ್ಲಿ ಶಾಸಕ ವೀರಣ್ಣ ಚರಂತಿಮಠ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು, ಜನತಾ ಕರ್ಪ್ಯೂ ಮಧ್ಯೆ ಜನರು ಹೆಚ್ಚೆಚ್ಚು ಸೇರುತ್ತಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು.
ಈ ಬಗ್ಗೆ ಜನರು ಸಹ ಅರ್ಥ ಮಾಡಿಕೊಳ್ಳಬೇಕು. ಜನತಾ ಕರ್ಫ್ಯೂ, ಲಾಕ್ಡೌನ್ ಆದ್ರೂ ಜನರು ಅರ್ಥ ಮಾಡಿಕೊಳ್ಳುತ್ತಿಲ್ಲ. ಈ ಬಗ್ಗೆ ಜನರೇ ತಿಳಿವಳಿಕೆ ಹೊಂದಬೇಕು. ಜನರು ಧೈರ್ಯದಿಂದ ಇರಬೇಕು. ಧೈರ್ಯ ತುಂಬುವ ಕೆಲಸ ಸರ್ಕಾರ ಮಾಡುತ್ತದೆ ಶಾಸಕರು, ಸಚಿವರು ಎಲ್ಲರೂ ಜನರೊಂದಿಗೆ ಇರ್ತೆವೆ, ಸರ್ಕಾರದ ಜೊತೆಗೆ ಜನರು ಸಹಕಾರ ನೀಡಬೇಕು ಎಂದರು.
ಸಚಿವ ಉಮೇಶ ಕತ್ತಿ ಪ್ರತಿಕ್ರಿಯೆ ಬಾಗಲಕೋಟೆ ಜಿಲ್ಲೆಗೆ ಆಕ್ಸಿಜನ್ ಕೊರತೆ ವಿಚಾರವಾಗಿ ಮಾತನಾಡಿ, ಜಿಲ್ಲೆಯಲ್ಲಿ ದಿನೇ ದಿನೇ ಹೆಚ್ಚಿದ ಸೋಂಕಿನಿಂದ ಪಾಸಿಟಿವ್ ರೇಟ್ 11ರಿಂದ 20ಕ್ಕೆ ಬಂದಿದೆ. ಈಗ 9 ಕಿಲೋ ಲೀಟರ್ ಆಕ್ಸಿಜನ್ ಬೇಕಿದೆ, ಆದ್ರೆ ಇದೇ ಪರಿಸ್ಥಿತಿ ಮುಂದುವರಿದರೆ ಪ್ರತಿದಿನ 18 ಕಿಲೋ ಲೀಟರ್ ಆಕ್ಸಿಜನ್ ಬೇಕಾಗುತ್ತದೆ. ಇಂತಹ ಪ್ರಸಂಗ ಬಂದರೆ ಹೆಚ್ಚುವರಿ ಆಕ್ಸಿಜನ್ ಪಡೆಯಲಾಗುವುದು. ಜಿಲ್ಲೆಯಲ್ಲಿ ಆಕ್ಸಿಜನ್ ಬೆಡ್ ಫುಲ್ ಆಗಿವೆ. ಯಾವುದು ಖಾಲಿ ಇಲ್ಲ ಆಕ್ಸಿಜನ್ ಬೆಡ್ಗಳು ಬೇಕೆಂದು ಬಂದಾಗ ವೈದ್ಯರಿಗೆ ಹೇಳಿ ಒದಗಿಸುತ್ತೇವೆ. ಈಗ ಖಾಲಿ ಇರುವ 530 ಬೆಡ್ ತುಂಬುತ್ತೇವೆ. ಆಕ್ಸಿಜನ್ ಬೇಕೆಂದಾಗ ಅವುಗಳನ್ನು ಕನ್ವರ್ಟ್ ಮಾಡುತ್ತೇವೆ ಎಂದರು.
ಸರ್ಕಾರ ಐಸಿಯುನಲ್ಲಿದೆ ಎಂದ ಡಿಕೆಶಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ವಿರೋಧ ಪಕ್ಷದವರಿಗೆ ಮಾಡೋಕೆ ಬೇರೆ ಕೆಲಸ ಇಲ್ಲ. ಅವರೇನೇನೋ ಮಾತನಾಡ್ತಾರೆ. ಈ ಬಗ್ಗೆ ತಲೆ ಕಡೆಸಿಕೊಳ್ಳಬೇಕಾಗಿಲ್ಲ ಎಂದು ತಿರುಗೇಟು ನೀಡಿದರು.
ರಾಜ್ಯದಲ್ಲಿ ಜನತಾ ಕರ್ಫ್ಯೂ ಒಂದು ವಾರ ಮುಂದುವರಿಯಲಿದೆ. ಮುಂದಿನ ಪ್ರಸಂಗ ನೋಡಿಕೊಂಡು ಮುಂದುವರೆಸುತ್ತಾರೆ. ಆದರೆ ಲಾಕ್ಡೌನ್ ಮಾಡುವುದಿಲ್ಲ. ಈ ಬಗ್ಗೆ ಈಗಾಗಲೇ ಕ್ಯಾಬಿನೆಟ್ನಲ್ಲಿ ನಿರ್ಧಾರ ತೆಗೆದುಕೊಂಡಿದ್ದೇವೆ, ಜನತಾ ಕರ್ಫ್ಯೂ ಮಾತ್ರ ಮುಂದುವರಿರೆಸುತ್ತೇವೆ ಎಂದು ಸ್ಪಷ್ಟ ಪಡಿಸಿದರು.