ಬಾಗಲಕೋಟೆ:ರಾಜ್ಯದಲ್ಲಿ ಕೋವಿಡ್ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಆತಂಕ ಮೂಡಿಸಿದೆ. ಈ ಮಧ್ಯೆ ಸರಿಯಾದ ಸಮಯಕ್ಕೆ ಆಕ್ಸಿಜನ್ ಇಲ್ಲದೇ ಮೃತ ಪಡುತ್ತಿರುವವರ ಸಂಖ್ಯೆಯೂ ಕೂಡಾ ಅಧಿಕವಾಗುತ್ತಿದೆ. ಈ ಹಿನ್ನೆಲೆ ಹುನಗುಂದ ಶಾಸಕರಾದ ದೊಡ್ಡಗೌಡ ಪಾಟೀಲ ಅವರು ತಮ್ಮ ಸ್ವಂತ ವೆಚ್ಚದಲ್ಲಿ ಆಕ್ಸಿಜನ್ ಘಟಕಕ್ಕೆ ಪುನಶ್ಚೇತನ ನೀಡಿ, ಮರಳಿ ಪ್ರಾರಂಭಿಸುವ ಮೂಲಕ ಗಮನ ಸೆಳೆದಿದ್ದಾರೆ.
ಹುನಗುಂದ, ಇಳಕಲ್ ತಾಲೂಕಿನಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಶಾಸಕ ದೊಡ್ಡನಗೌಡ ಪಾಟೀಲ ಅವರು, ಕೋವಿಡ್ ಚಿಕಿತ್ಸೆ ಗೆ ನಿಗದಿ ಪಡಿಸಿದ ಗೌಳೇರ ಗುಡಿ ಹತ್ತಿರ ಇರುವ 30 ಹಾಸಿಗೆಗಳ ಆಸ್ಪತ್ರೆಗೆ ಭೇಟಿ ನೀಡಿ ಆಕ್ಸಿಜನ್ ಹಾಗೂ ಬೆಡ್ ವ್ಯವಸ್ಥೆ ಸೇರಿದಂತೆ ಮೂಲ ಸೌಕರ್ಯಗಳ ಪರಿಶೀಲನೆ ನಡೆಸಿದರು. ನಂತರ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಚೇತನಾ ಆಸ್ಪತ್ರೆ ವೈದ್ಯಕೀಯ ಸಿಬ್ಬಂದಿ ಸಮಾಲೋಚನೆ ನಡೆಸಿ, ಚಾಮರಾಜನಗರದಲ್ಲಿ ಆದ ಘಟನೆ ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ನೀಡಿದರು.