ಬಾಗಲಕೋಟೆ:ದೇಶಕ್ಕಾಗಿ ಹೋರಾಟ ಮಾಡಿ ಪ್ರಾಣ ಕಳೆದುಕೊಂಡವರಲ್ಲಿ ಬಿಜೆಪಿ, ಆರ್ಎಸ್ಎಸ್ನವರು ಒಬ್ಬರಾದರೂ ಇದ್ದಾರಾ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ಗ್ರಾಮ ಪಂಚಾಯತಿ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಆರ್ಎಸ್ಎಸ್ ಹಾಗೂ ಬಿಜೆಪಿ ಪಕ್ಷದ ಇತಿಹಾಸವನ್ನು ತಿಳಿಸಿ, ದೇಶಕ್ಕಾಗಿ ಹೋರಾಟ ಮಾಡಿ, ಪ್ರಾಣ ಕಳೆದುಕೊಂಡವರಲ್ಲಿ ಬಿಜೆಪಿ, ಆರ್ಎಸ್ಎಸ್ನವರು ಒಬ್ಬರಾದರೂ ಇದ್ದಾರಾ ಎಂದು ಪ್ರಶ್ನಿಸಿದರು.
ಗ್ರಾಮ ಪಂಚಾಯತಿ ಚುನಾವಣೆ ಹಿನ್ನೆಲೆ ಎರಡು ದಿನಗಳ ಕಾಲ ಬಾದಾಮಿ ಮತ ಕ್ಷೇತ್ರದಲ್ಲಿ ಪ್ರವಾಸ ಹಮ್ಮಿಕೊಂಡಿದ್ದು, ಬಾದಾಮಿ ಪಟ್ಟಣದ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಕಾರ್ಯಕರ್ತರ ಸಮಾರಂಭದಲ್ಲಿ ಅವರು ಮಾತನಾಡಿದರು. ನಮ್ಮದು ಮಹಾತ್ಮ ಗಾಂಧಿ ಹಿಂದುತ್ವ ಆಗಿದ್ದರೆ, ಬಿಜೆಪಿ ಪಕ್ಷದವರದು ಸಾರ್ವಕರ್ ಹಿಂದುತ್ವ ಆಗಿದೆ. 1926ರಲ್ಲಿ ಪ್ರಾರಂಭವಾದ ಆರ್ಎಸ್ಎಸ್ ಹೇಗೆ ಬಿಜೆಪಿ ಪಕ್ಷ ಆಯಿತು. ನಂತರ ಯಾವ ಮಟ್ಟದಲ್ಲಿ ಪಕ್ಷ ಬೆಳೆಯಿತು ಎಂದು ಬಿಜೆಪಿಯ ಇತಿಹಾಸದ ಬಗ್ಗೆ ಹೇಳಿದರು.
ಓದಿ: ಭೂಸ್ವಾಧೀನಕ್ಕೆ ರಟ್ಟಿಹಳ್ಳಿಯಲ್ಲಿ ರೈತರ ವಿರೋಧ: ಪ್ರತಿಭಟನೆಯಲ್ಲಿ ಇಂದು ಸಿದ್ದರಾಮಯ್ಯ ಭಾಗಿ
ಬಿಜೆಪಿ ಪಕ್ಷದವರು ದೇಶಕ್ಕೆ ನೀಡಿರುವ ಕೂಡುಗೆ ಅಂದರೆ ಸುಳ್ಳು ಹೇಳುವುದು, ಲೂಟಿ ಮಾಡುವುದು. ಅವರು ದಲಿತರನ್ನು ಮುಂದೆ ಬಿಟ್ಟು ಜೈಲಿಗೆ ಕಳಿಸುತ್ತಾರೆ. ನಂತರ ಬೇಲ್ ಮೇಲೆ ಬಿಡುಗಡೆ ಮಾಡಿಸಿ, ಕೇಸರಿ ಶಾಲು ಹಾಕಿ ಜೈ ಶ್ರೀರಾಮ ಎಂದು ಘೋಷಣೆ ಕೂಗಿಸುತ್ತಾರೆ. ಶ್ರೀರಾಮ ಮಂದಿರ ಇವರಿಗೆ ಅಷ್ಟೇನಾ? ನಮಗೂ ರಾಮನ ಮೇಲೆ ಭಕ್ತಿ ಇಲ್ವಾ ಎಂದರು.
ಗೋ ಹತ್ಯೆ ನಿಷೇಧ ಬಗ್ಗೆ ವಿರೋಧ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಬಿಜೆಪಿ ಪಕ್ಷದವರು ಡಾಂಬಿಕವಾಗಿ ಪೂಜೆ ಮಾಡುತ್ತಾರೆ. ನಾವು ನಿಜವಾಗಿಯೂ ಪೂಜೆ ಮಾಡುವವರು. ವಯಸ್ಸು ಆದ ಬಳಿಕ ಗೋವು ಸಾಕಲು ರೈತರಿಗೆ ಸಾಧ್ಯವಾಗುವುದಿಲ್ಲ. ಹಾಗಾಗಿ ಮಾರಾಟ ಮಾಡುತ್ತಾರೆ. ಆದರೆ ಕಂದಾಯ ಸಚಿವ ಆರ್.ಅಶೋಕ್ ವಯಸ್ಸು ಆಗಿರುವ ಗೋವುಗಳು ತಂದು ಬಿಟ್ಟು ಹೋಗಿ ಎಂದು ಹೇಳಿದ್ದಾರೆ. ಹಣ ಕೊಡಿ, ಗೋವು ಬಿಟ್ಟು ಹೋಗುತ್ತೇವೆ ಎಂದು ತಿರುಗೇಟು ನೀಡಿದರು.
ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳಿಗೆ ಮತ ಹಾಕಬೇಡಿ. ಬಾದಾಮಿ ಮತಕ್ಷೇತ್ರದಲ್ಲಿ ಒಟ್ಟು 35 ಗ್ರಾಮ ಪಂಚಾಯತಿಗಳಿದ್ದು, ಅದರಲ್ಲಿ 30 ಗ್ರಾಮ ಪಂಚಾಯತಿಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿಯಬೇಕು. ಈ ನಿಟ್ಟಿನಲ್ಲಿ ಕಾರ್ಯಕರ್ತರು ಶ್ರಮ ವಹಿಸಬೇಕು ಎಂದು ಕರೆ ನೀಡಿದರು.