ಬಾಗಲಕೋಟೆ : ಶಿಕ್ಷಣ ಇಲಾಖೆಯಲ್ಲಿ ಪಾರದರ್ಶಕತೆಯನ್ನು ಹೊಂದಬೇಕು. ನಿತ್ಯ ಶಿಕ್ಷಕರು ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸುವ ಹಿನ್ನೆಲೆಯಲ್ಲಿ ಜೂನ್ ತಿಂಗಳಿನಲ್ಲಿಯೇ ಆನ್‍ಲೈನ್ ಸೇವೆಯನ್ನು ಒದಗಿಸಲಾಗುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಹೆಚ್. ಗೋನಾಳ ಹೇಳಿದರು.
ನಗರದ ವಿಜ್ಞಾನ ಕೇಂದ್ರದಲ್ಲಿ ಏರ್ಪಡಿಸಿದ್ದ ಆನ್‍ಲೈನ್ ಸೇವೆಯ ಕುರಿತು ಲಿಪಿ ನೌಕರರ ತರಬೇತಿ ಕಾರ್ಯಾಗಾರವನ್ನು, ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಆನ್‍ಲೈನ್ ಸೇವೆಯನ್ನು ಒದಗಿಸಲು ಶಿಕ್ಷಣ ಇಲಾಖೆ ಮುಂದಾಗಿದೆ. ಆ ಮೂಲಕ ಆಯ್ಕೆ ಮಾಡಿಕೊಂಡ ಒಟ್ಟು 12 ಸೇವೆಗಳನ್ನು ಪ್ರಾರಂಭಿಕ ಹಂತದಲ್ಲಿ ಜಾರಿಗೆ ತರಲಾಗುತ್ತಿದೆ. ಈ ಸೇವೆಗಳನ್ನು ಆನ್‍ಲೈನ್ ತಂತ್ರಾಂಶದ ಮೂಲಕ ಒದಗಿಸಲು ಇಲಾಖೆಯು ನಿರ್ಧರಿಸಿದೆ. ಈ ಸೇವೆಗಳು ಹೊಸ ವಿಧಾನವಾಗಿದ್ದರಿಂದ, ಈಗಾಗಲೇ ಅಧಿಕಾರಿಗಳು, ಸಿಬ್ಬಂದಿ ರಾಜ್ಯ ಮಟ್ಟದಲ್ಲಿ ತರಬೇತಿಯನ್ನು ಪಡೆದುಕೊಂಡು ಬಂದಿದ್ದಾರೆ.