ಬಾಗಲಕೋಟೆ:ಜಿಲ್ಲೆಯ ಐತಿಹಾಸಿಕ ಕೇಂದ್ರ ಹಾಗೂ ಧಾರ್ಮಿಕ ಸ್ಥಳವೂ ಆಗಿರುವ ಬಾದಾಮಿ ಬನಶಂಕರಿ ದೇವಿಯ ಜಾತ್ರಾ ಮಹೋತ್ಸವಕ್ಕೆ ಇಂದು (ಶುಕ್ರವಾರ) ಚಾಲನೆ ಸಿಕ್ಕಿದೆ. ಬರೋಬ್ಬರಿ ಒಂದು ತಿಂಗಳ ಕಾಲ ನಡೆಯುವ ಈ ಜಾತ್ರೆಯನ್ನು ಪ್ರಮುಖವಾಗಿ ಮನರಂಜನಾ ಜಾತ್ರೆ ಎಂದೇ ಕರೆಯಲಾಗುತ್ತದೆ.
ರಥೋತ್ಸವದ ಮುನ್ನಾ ದಿನ ದೇವಿಗೆ ಪಲ್ಲೇದ ಹಬ್ಬ(ಕಾಯಿಪಲ್ಲೆ) ಎಂದು ಮಾಡುವ ಮೂಲಕ ಗಮನ ಸೆಳೆಯುತ್ತದೆ. ವಿವಿಧ ಬಗೆಯ ಸುಮಾರು 50ಕ್ಕೂ ಅಧಿಕ ತರಕಾರಿಗಳಿಂದ ಅಲಂಕಾರ ಮಾಡಿ ಪೂಜೆ ಸಲ್ಲಿಸುವ ಮೂಲಕ ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ವೇಣುಗೋಪಾಲ ಎಂಬುವ ಬೆಂಗಳೂರಿನ ಭಕ್ತರೊಬ್ಬರು ಪ್ರತಿ ವರ್ಷ ಅಲ್ಲಿಂದಲೇ ತರಕಾರಿ ತೆಗೆದುಕೊಂಡು ಬಂದು ಅರ್ಚಕರ ಮೂಲಕ ಅಲಂಕಾರ ಮಾಡಿಸುತ್ತಾರೆ. ಈ ಬಾರಿಯೂ ತಮ್ಮ ಹರಕೆಯಂತೆ ಹೀಗೆ ತರಕಾರಿ ತೆಗೆದುಕೊಂಡು ಬಂದು ಭಕ್ತಿ ಮೆರೆದಿದ್ದಾರೆ.
ಬನಶಂಕರಿ ಎಂದರೆ? ಬಾದಾಮಿ ಎಂಬ ಊರಿನ ಹೆಸರನ್ನು ಕೇಳಿದ ತಕ್ಷಣ ನಮಗೆ ನೆನಪಿಗೆ ಬರುವುದು ಬನಶಂಕರಿ ದೇವಾಲಯ. ಭಾರತದಲ್ಲಿರುವ ಒಟ್ಟು ಶಕ್ತಿ ಪೀಠಗಳಲ್ಲಿ ಬಾದಾಮಿ ಬನಶಂಕರಿ ದೇವಿಯ ಕ್ಷೇತ್ರವು ಒಂದಾಗಿದೆ. ಇತಿಹಾಸದಲ್ಲಿ ಅಗಸ್ತ್ಯ ಋಷಿಗಳು ಬನಶಂಕರಿಯನ್ನು ಬನಸಿರಿದೇವಿ ಎಂದು ಕರೆಯುತ್ತಿದ್ದರು ಎಂಬ ಉಲ್ಲೇಖವು ಇದೆ. “ಬನ” ಎಂದರೆ ಅರಣ್ಯ “ಸಿರಿ” ಎಂದರೆ ಸಂಪತ್ತು. ಚಾಲುಕ್ಯರ ಆಳ್ವಿಕೆಯ ಕಾಲದಲ್ಲಿ ಬಾದಾಮಿ ಅವರ ರಾಜಧಾನಿಯಾಗಿತ್ತು. ಇವರು ಬನಶಂಕರಿ ದೇವಿಯನ್ನು ತಮ್ಮ ಆರಾಧ್ಯ ದೇವತೆ ಮತ್ತು ಕುಲದೇವತೆಯಾಗಿ ಮಾಡಿಕೊಂಡಿದ್ದರು.
ಸ್ಕಂದ ಪುರಾಣದಲ್ಲಿ ಬನಶಂಕರಿದೇವಿ: ಪೂರ್ವಕಾಲದಲ್ಲಿ ನೂರಾರು ವರ್ಷಗಳ ಕಾಲ ಮಳೆ ಆಗದೇ ಭೂಮಿಯಲ್ಲಿ ಘೋರ ದುರ್ಭಿಕ್ಷೆ ಉಂಟಾಗಿಗಿತ್ತಂತೆ. ಸಕಲ ಕ್ರಿಯಾಕರ್ಮಗಳು ಅಲ್ಲೋಲಕಲ್ಲೋಲ ಆಗಿದ್ದರಿಂದ ಆಗ ದೇವತೆಗಳು ಮತ್ತು ಪ್ರಜೆಗಳು ಸೇರಿ ಶಿವನನ್ನು ಕುರಿತು ತಪಸ್ಸು ಮಾಡಿದ್ದಂತೆ. ಶಿವನು, ಬ್ರಹ್ಮನು ಮತ್ತು ಎಲ್ಲ ದೇವತೆಗಳು ಈ ಸಮಸ್ಯೆಗೆ ಪರಿಹಾರ ನೀಡುವಂತೆ ಈಗಿರುವ ಬದಾಮಿ ಕ್ಷೇತ್ರಕ್ಕೆ ಬಂದು ಅಲ್ಲಿಯ ಬನಶಂಕರಿಯನ್ನು ಕುರಿತು ಪ್ರಾರ್ಥನೆ ಮಾಡಿದರಂತೆ. 'ಈ ಕ್ಷೇತ್ರದಲ್ಲಿ ಮಳೆಯಿಲ್ಲದೆ ಯಜ್ಞ ಯಾಗಾದಿಗಳು ನಿಂತು ಹೋಗಿವೆ.
ಬದುಕಲು ಕಷ್ಟವಾಗಿದೆ. ಆದ್ದರಿಂದ ಜಲ ನೀಡಿ ಕಾಪಾಡು. ಮಳೆ ಸುರಿಸಿ ನಮ್ಮನ್ನು ರಕ್ಷಿಸು' ಎಂದು ಪ್ರಾರ್ಥಿಸಿದ್ದರಂತೆ. ಇವರ ಪ್ರಾರ್ಥನೆಗೆ ಬನಶಂಕರಿ ದೇವಿಯು ಪ್ರಸನ್ನಳಾಗಿ ಪ್ರತ್ಯಕ್ಷಳಾಗಿದ್ದಳಂತೆ. ಅಲ್ಲದೇ ತನ್ನ ಶರೀರದಿಂದ ಉತ್ಪನ್ನವಾದ ಶಾಖಗಳಿಂದ ಮೂರು ಲೋಕಗಳನ್ನು ಸಂರಕ್ಷಿಸಿದಳು ಎಂಬ ಉಲ್ಲೇಖವೂ ಇದೆ.
ದೇವಿ ನೀರು ಕರುಣಿಸಿದ್ದರಿಂದ ಆಹಾರ ಧಾನ್ಯಗಳು ಉತ್ಪತ್ತಿಯಾಗಿ ಜಗತ್ತಿನ ಜೀವರಾಶಿಗಳ ಹಸಿವು ನಿವಾರಿಸಿತಂತೆ. ಬಳಿಕ ಅನೇಕ ಬನಗಳು ನಿರ್ಮಾಣವಾದವು. ದೇವಿಯ ಮೈಶಾಖದಿಂದ ತರಕಾರಿ (ಕಾಯಿಪಲ್ಲೆ) ಗೆಡ್ಡೆ ಗೆಣಸುಗಳು ಉತ್ಪತ್ತಿಯಾದವು. ಇದೇ ಕಾರಣದಿಂದ ದೇವಿಯನ್ನು “ಶಾಕಾಂಬರಿ” ಎಂದು ಸಹ ಕರೆಯುತ್ತಾರಂತೆ. ದೇವಿಯ ಕ್ಷೇತ್ರದ ಅಕ್ಕಪಕ್ಕದಲ್ಲಿ ಹರಿದ್ರಾತೀರ್ಥ, ತೈಲತೀರ್ಥ, ಕ್ಷಮಾತೀರ್ಥ, ಪದ್ಮ ತೀರ್ಥ, ಇಂದ್ರೀಯ ನಿಗ್ರಹತೀರ್ಥ ಹೀಗೆ.. ಅನೇಕ ತೀರ್ಥ ಕೊಳಗಳನ್ನು ಸೃಷ್ಟಿ ಮಾಡಿದಳು. ದೇವಿಯ ಅನುಗ್ರಹದಿಂದ ಈ ಭೂಮಿ ನಂದನವನವಾಗಿ ಕಂಗೊಳಿಸಲು ಭೂಮಿಯಲ್ಲಿ ಸುಭಿಕ್ಷೆ ನೆಲೆಸಿತು ಎಂಬ ಪ್ರತೀತಿ ಕೂಡ ಇದೆ.