ಬಾಗಲಕೋಟೆ :ನಗರದ ವಲ್ಲಭಭಾಯಿ ವೃತ್ತ, ತರಕಾರಿ ಮಾರುಕಟ್ಟೆಯಲ್ಲಿನ ಅಕ್ರಮವಾಗಿ ನಿರ್ಮಿಸಿರುವ ಅಂಗಡಿ ಮತ್ತು ಅವುಗಳ ಮುಂದೆ ಹಾಕಿರುವ ನಾಮಫಲಕ ಛಾವಣಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಲಾಯಿತು.
ಕೊರೊನಾ ನಡುವೆಯೂ ಬೀದಿ ವ್ಯಾಪಾರಸ್ಥರ ಅಂಗಡಿಗಳನ್ನು ತೆರವುಗೊಳಿಸಿದ ಅಧಿಕಾರಿಗಳು ಮೊದಲೇ ಕೊರೊನಾದಿಂದ ಕಂಗೆಟ್ಟಿರುವ ಬೀದಿ ವ್ಯಾಪಾರಸ್ಥರು,ಇದೀಗ ತಾನೇ ವ್ಯಾಪಾರ, ವಹಿವಾಟು ನಡೆಸುತ್ತಿದ್ದರು. ಈಗ ತೆರೆವು ಕಾರ್ಯಾಚರಣೆಯಿಂದಾಗಿ ವ್ಯಾಪಾರಸ್ಥರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಮುಳುಗಡೆ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಬಾಗಲಕೋಟೆಯ ಟಾಂಗಾ ಸ್ಟಾಂಡ್ ನಿಲ್ದಾಣ, ತರಕಾರಿ ಮಾರುಕಟ್ಟೆ ಹತ್ತಿರ ಸುಮಾರು 40ಕ್ಕೂ ಅಧಿಕ ಪೆಟ್ಟಿ ಅಂಗಡಿ ತೆರೆದು ವ್ಯಾಪಾರ ನಡೆಸುತ್ತಿದ್ದರು. ಇಂದು ನಗರಸಭೆ ಆಯುಕ್ತರ ನೇತೃತ್ವದಲ್ಲಿ ಪೊಲೀಸ್ ಸಮ್ಮುಖದಲ್ಲಿ ತೆರವು ಕಾರ್ಯಾಚರಣೆ ನಡೆಸಿದರು. ಒಟ್ಟು 190ಕ್ಕೂ ಅಧಿಕ ಅಂಗಡಿಗಳ ಮುಂದೆ ಅಕ್ರಮವಾಗಿ ತಗಡಿನ ಛಾವಣಿ ಹಾಕಲಾಗಿತ್ತು. ಎಂಜಿರಸ್ತೆ, ಅಡತ ಬಜಾರ, ಬಸವೇಶ್ವರ ವೃತ್ತದ ಬಳಿ ತೆರೆವುಗೊಳಿಸುವ ಕಾರ್ಯಾಚರಣೆ ನಡೆಸಲಾಯಿತು.
ಆದರೆ, ಈ ಸಮಯದಲ್ಲಿ ಬೀದಿ ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಕೊರೊನಾದಿಂದ ಮೂರು ತಿಂಗಳ ಕಾಲ ವ್ಯಾಪಾರ, ವಹಿವಾಟು ಬಂದ್ ಆಗಿ, ಊಟಕ್ಕೂ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಮಯದಲ್ಲಿ ತೆರೆವುಗೊಳಿಸುವ ಅಗತ್ಯವಾದರೂ ಏನು ಇತ್ತು ಎಂಬ ಪ್ರಶ್ನೆ ಮಾಡಿದ್ದಾರೆ. ಇವರೆಲ್ಲ ಚಿಕ್ಕಪುಟ್ಟ ವ್ಯಾಪಾರ ಮಾಡುತ್ತಾ ಜೀವನ ಸಾಗಿಸುತ್ತಿದ್ದರು. ಆದರೆ, ತೆರೆವುಗೊಳಿಸಿದ ಪರಿಣಾಮ ಈಗ ಮತ್ತೆ ಬೀದಿ ಪಾಲಾಗುವಂತಾಗಿದೆ. ಮುಂದೆ ಜೀವನಕ್ಕೆ ತೊಂದರೆ ಆಗದಂತೆ ಬೇರೆ ಕಡೆಗಾದ್ರೂ ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.