ಬಾಗಲಕೋಟೆ :ಜನ ಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಮರಳು ಪೂರೈಸುವ ನಿಟ್ಟಿನಲ್ಲಿ ಇದೇ ಏಪ್ರಿಲ್ ತಿಂಗಳಿನಿಂದ ಹೊಸ ಮರಳು ನೀತಿ ಜಾರಿಗೆ ತರಲಾಗುತ್ತಿದೆ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಮಾತನಾಡಿದ ಅವರು, ಈ ಹೊಸ ನೀತಿಯನ್ವಯ 10 ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಮನೆಗಳಿಗೆ ಪ್ರತಿ ಟನ್‍ಗೆ 100 ರೂ.ಗಳಿಗೆ ಆಯಾ ಭಾಗದ ಗ್ರಾಮ ಪಂಚಾಯತ್, ನಗರಸಭೆ ಅನುಮತಿ ತೋರಿಸಿದಂತೆ ನಿಗದಿತ ಮರಳು ಪೂರೈಸಲಾಗುವುದು. ಸರ್ಕಾರದಿಂದ ಟೆಂಡರ್ ಕರೆಯಲಾಗಿದೆ. ಕಾಮಗಾರಿಗಳಿಗೆ ಮರಳು ಸಂಗ್ರಹ ಹೊರತುಪಡಿಸಿ ಗುತ್ತಿಗೆದಾರ ಕಾರ್ಯನಿರ್ವಹಿಸಿದಂತೆ ಹಂತ ಹಂತವಾಗಿ ಪೂರೈಸಲಾಗುವುದು ಎಂದರು.
ಸಾರ್ವಜನಿಕರು ಉಪಯೋಗಿಸಲ್ಪಡುವ ಕುಡಿಯುವ ನೀರಿಗೆ ಸಂಬಂಧಿಸಿದ ಸ್ಥಳಗಳಾದ ಹಳ್ಳ, ಕೆರೆ ಹಾಗೂ ಆಣೆಕಟ್ಟಿನ ಹಿನ್ನೀರಿನ ಪ್ರದೇಶದಲ್ಲಿ ಮರಳು ತೆಗೆಯದಂತೆ ನಿರ್ಬಂಧ ಹೇರಲಾಗುತ್ತಿದೆ. ಮರಳು ದರವನ್ನು ಪ್ರತಿದಿನ ಬಂಗಾರ, ಬೆಳ್ಳಿ ದರ ಪ್ರಕಟಗೊಂಡಂತೆ ಪ್ರತಿ ವಾರಕ್ಕೊಮ್ಮೆ ದರದ ಪಟ್ಟಿ ನೀಡಲಾಗುವುದು. ಇದರಿಂದ ಸರ್ಕಾರಕ್ಕೆ ಆದಾಯ ಹೆಚ್ಚುವುದರ ಜೊತೆಗೆ ಸಾರ್ವಜನಿಕರಿಗೆ ಮುಕ್ತ ಮರಳು ದೊರೆಯಲಿದೆ ಎಂದರು.