ಬಾಗಲಕೋಟೆ: ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ದೇಶದಲ್ಲಿ ಭಾರೀ ಬದಲಾವಣೆಯಾಗಲಿದೆ. ಶಿಕ್ಷಣದ ಜತೆಗೆ ಅನೇಕ ಕೌಶಲಗಳನ್ನು ಒಂದೇ ಕಾಲಕ್ಕೆ ವಿದ್ಯಾರ್ಥಿಗಳಿಗೆ ತಿಳಿಸುವ ಉದ್ದೇಶದಿಂದ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗಿದೆ. ಜಾಗತಿಮಟ್ಟದ ಬೆಳವಣಿಗೆಯನ್ನು ಆಧಾರವಾಗಿಟ್ಟುಕೊಂಡು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸಲಾಗಿದೆ ಎಂದು ಹೂಸ ರಾಷ್ಟ್ರೀಯ ಶಿಕ್ಷಣ ನೀತಿ ಸಮಿತಿ ಚೇರಮನ್ ಹಾಗೂ ಬಾಹ್ಯಾಕಾಶ ವಿಜ್ಞಾನಿ ಡಾ ಕೆ ಕಸ್ತೂರಿ ರಂಗನ್ ಹೇಳಿದರು.
ನಗರದ ಬಿವಿವಿ ಸಂಘದಿಂದ ಕಾಲೇಜ್ ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಬಸವೇಶ್ವರ ಕಲಾ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಅಮೃತ ಮಹೋತ್ಸವ, ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯ ಸುವರ್ಣ ಮಹೋತ್ಸವ ಸಂಭ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆರ್ಥಿಕವಾಗಿ ಬೆಳೆಯುತ್ತಿರುವ ವಿಶ್ವದ ನೂರು ದೇಶಗಳಲ್ಲಿ ಭಾರತವು ಮುಂಚೂಣಿಯಲ್ಲಿದೆ.
ಆದರೆ, ಸಂಶೋಧನೆಯಲ್ಲಿ ಹಿಂದುಳಿದಿದೆ. ಇದಕ್ಕಾಗಿ ನ್ಯಾಷನಲ್ ರಿಸರ್ಚ -ಪೌಂಡೇಶನ್ ಸ್ಥಾಪಿಸಲಾಗಿದೆ. ಇಂದು ವಿವಿಗಳಲ್ಲಿ ನಡೆಯುತ್ತಿರುವ ಸಂಶೋಧನೆಗಳು ಸೀಮಿತಮಟ್ಟದಲ್ಲಿವೆ. ಇದು ಆತಂಕಕ್ಕೆ ಕಾರಣವಾಗಿದೆ. ಹೊಸ ಶಿಕ್ಷಣ ನೀತಿಯಲ್ಲಿ ಆತ್ಮ ನಿರ್ಭರ ಭಾಗವಾಗಿ ಸಂಶೋಧನೆಗೆ ಒತ್ತು ನೀಡಲಾಗಿದೆ ಎಂದರು.
ಮುಂದಿನ 10 ವರ್ಷಗಳಲ್ಲಿ ದೇಶವು 35 ವಯಸ್ಸಿನೊಳಗೆ ಶೇ.50 ರಷ್ಟು ಜನ ಸಂಖ್ಯೆ ಹೊಂದಲಿದೆ. ಅವರಿಗೆ ಮೌಲ್ಯ, ಕೌಶಲ, ಶಕ್ತಿ ಹೊಸ ಶಿಕ್ಷಣ ನೀತಿ ನೀಡಲಿದೆ. ಕರ್ನಾಟಕ ಶಿಕ್ಷಣ, ಆವಿಷ್ಕಾರದ ಶಕ್ತಿ ಕೇಂದ್ರವಾಗುತ್ತಿರುವುದು ಖುಷಿ ತಂದಿದೆ ಮಕ್ಕಳ ಕಲಿಕೆ ಸಾಮರ್ಥ್ಯ ಹಾಗೂ ಮಗುವಿನ ಮೆದುಳು ಸಮಗ್ರವಾಗಿ ಬೆಳವಣಿಗೆ, ವಿಶ್ವಮಟ್ಟದಲ್ಲಿ ಆಗುತ್ತಿರುವ ಬದಲಾವಣೆ ಗಮನದಲ್ಲಿಟ್ಟುಕಂಡು ಹೊಸ ನೀತಿಯಲ್ಲಿ ಪಠ್ಯ ರೂಪಿಸಲಾಗಿದೆ. ಶಿಕ್ಷಣದ ಮೊದಲ 5 ವರ್ಷ ಬಹಳ ಮುಖ್ಯ. ಅದನ್ನು ಆಧಾರಿಸಿ ನೀತಿ ರಚಿಸಲಾಗಿದೆ. ದೇಶದಲ್ಲಿ ಹಲವು ಬದಲಾವಣೆಗೆ ಕಾರಣವಾಗಲಿದೆ ಎಂದು ಹೇಳಿದರು.