ಬಾಗಲಕೋಟೆ: ಕೆಲಸ ಅರಸಿ ಗೋವಾಕ್ಕೆ ಹೋಗಿದ್ದ ಕಾರ್ಮಿಕರನ್ನು ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಬಾಯಕ್ಕ ಮೇಟಿ ಅವರು, ತಮ್ಮ ಸ್ವಂತ ಖರ್ಚಿನಲ್ಲಿ ಜಿಲ್ಲೆಗೆ ಕರೆತಂದಿದ್ದಾರೆ. ಜಿಲ್ಲಾ ಕಾಂಗ್ರೆಸ್ ಸಮಿತಿ ಪರವಾಗಿ ಕಾರ್ಮಿಕರನ್ನು ತವರು ಜಿಲ್ಲೆಗೆ ಸ್ವಾಗತಿಸಿದರು.
ಕಾರ್ಮಿಕರು ಬರುವ ಬಗ್ಗೆ ಜಿಲ್ಲಾಡಳಿತ ಮೊದಲೇ ಮಾಹಿತಿ ನೀಡಲಾಗಿದೆ. ಆದರೆ, ಕಾರ್ಮಿಕರಿಗೆ ಕುಡಿಯುವ ನೀರು, ಊಟೋಪಚಾರ ನೀಡದೆ ಜಿಲ್ಲಾಡಳಿತ ನಿರ್ಲಕ್ಷ್ಯಿಸಿದೆ ಎಂದು ಮೇಟಿ ಅವರು ಆರೋಪಿಸಿದರು.
ಈ ಕಾರ್ಮಿಕರನ್ನು ಪಕ್ಕದ ಜಿಲ್ಲೆ ಬೆಳಗಾವಿಯಲ್ಲಿ ಅಧಿಕಾರಿಗಳು ಉತ್ತಮವಾಗಿ ನೋಡಿಕೊಂಡು ಕಳಿಸಿಕೊಟ್ಟಿದ್ದಾರೆ. ತವರು ಜಿಲ್ಲೆಯ ಅಧಿಕಾರಿಗಳು ಅವರನ್ನು ಉಪವಾಸ ಇರುವಂತೆ ಮಾಡಿದೆ. ಮೊದಲೇ ವ್ಯವಸ್ಥೆ ಕಲ್ಪಿಸಲು ಆಗುವುದಿಲ್ಲ ಎಂದಿದ್ದರೆ, ನಾವೇ ಅವರಿಗೆ ಎಲ್ಲಾ ರೀತಿಯ ವ್ಯವಸ್ಥೆ ಮಾಡುತ್ತಿದ್ದೆವು ಎಂದರು.
ಜಿಲ್ಲಾಡಳಿತ ಯಾವುದೇ ವ್ಯವಸ್ಥೆ ಮಾಡದ ಹಿನ್ನೆಲೆ ಕಾರ್ಮಿಕರ ಮಕ್ಕಳಿಗೆ ಬಿಸ್ಕತ್ ಪೊಟ್ಟಣ ನೀಡಿ ಸಾಂತ್ವಾನ ಹೇಳಿದರು. ಈ ಬಗ್ಗೆ ಕೂಡಲೇ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಗಮನಹರಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.