ಬಾಗಲಕೋಟೆ : ಔಷಧ ಶಾಸ್ತ್ರದಲ್ಲಿ ಸಂಶೋಧನೆಗೆ ಹೆಚ್ಚಿನ ಆದ್ಯತೆ ಇದ್ದು ಅಹಮದಾಬಾದ್‌ನಲ್ಲಿ ರಾಷ್ಟ್ರೀಯ ಯುವ ವಿಜ್ಞಾನ ಸಮಾವೇಶ ನಡೆಸಲಾಗುವುದು ಎಂದು ಇಂಡಿಯನ್ ಫಾರ್ಮಾಕಾಲಜಿಕಲ್ ಸೊಸೈಟಿ ಅಧ್ಯಕ್ಷ ಡಾ. ಶಿವಪ್ರಕಾಶ ರತ್ನಮ್ ಹೇಳಿದರು.
ಪ್ರತಿಷ್ಠಿತ ಬಿವಿವಿ ಸಂಘದ ಹಾನಗಲ್ ಶ್ರೀ ಕುಮಾರೇಶ್ವರ ಔಷಧ ವಿಜ್ಞಾನ ಮಹಾವಿದ್ಯಾಲಯ, ಎಸ್. ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಇಂಡಿಯನ್ ಫಾರ್ಮಾಕಾಲಜಿಕಲ್ ಸೊಸೈಟಿ, ಇವರ ಸಹಯೋಗದೊಂದಿಗೆ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದ ಶತಾಬ್ದಿ ಭವನದಲ್ಲಿ ನಡೆದ 3 ದಿನಗಳ ಅಂತರರಾಷ್ಟ್ರೀಯ ಮಟ್ಟದ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮೈಸೂರಿನಲ್ಲಿ ನಡೆದ ಸಮ್ಮೇಳನಕ್ಕಿಂತ ಬಾಗಲಕೋಟೆಯ ಸಮ್ಮೇಳನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಂಶೋಧಕರು ಭಾಗವಹಿಸಿದ್ದು, ಸಮ್ಮೇಳನದ ಯಶಸ್ವಿಗೆ ಸಾಕ್ಷಿ. ಔಷಧ ಶಾಸ್ತ್ರದಲ್ಲಿ ಸಂಶೋಧನೆಗೆ ಹೆಚ್ಚಿನ ಆದ್ಯತೆ ಇದ್ದು, ಫಾರ್ಮಾಕಾಲಜಿ ವಿಷಯದಲ್ಲಿ ಸಂಶೋಧನೆಗೆ ನಮ್ಮ ಸಂಸ್ಥೆಯು ಹೆಚ್ಚು ಆದ್ಯತೆ ನೀಡುವುದರ ಜೊತೆಗೆ ಸಂಶೋಧಕರಿಗೆ ಅಗತ್ಯ ಹಣಕಾಸಿನ ನೆರವು ನೀಡುತ್ತೇವೆ. ಔಷಧಶಾಸ್ತ್ರ ತಜ್ಞರು ಹೆಚ್ಚೆಚ್ಚು ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಬೇಕು. ಈ ಬಾರಿ ಅಹಮದಾಬಾದ್‌ನಲ್ಲಿ ನಮ್ಮ ಫಾರ್ಮಾಜಿಕಾಲಜಿ ಸೊಸೈಟಿಯಿಂದ ರಾಷ್ಟೀಯ ಯುವ ವಿಜ್ಞಾನ ಸಮ್ಮೇಳನ ಆಯೋಜಿಸಲಾಗುವುದು. ಅದರಿಂದ ನಮ್ಮ ಯುವ ವಿಜ್ಞಾನಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ.
ದೇಶದಲ್ಲಿ ವ್ಯಾಪಾರಸ್ಥರು, ಉದ್ಯಮಿಗಳು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ್ದಾರೆ. ಶಿಕ್ಷಣ ಸಂಸ್ಥೆಗಳು ಅಭಿವೃದ್ಧಿಯಾದರೆ ದೇಶದ ಅಭಿವೃದ್ಧಿ ಸಾಧ್ಯ. ಉದಾರಣೆಗೆ ಬಿವಿವಿ ಸಂಘದ ಉತ್ತಮ ಗುಣಮಟ್ಟದ ಶಿಕ್ಷಣದ ದಾಸೋಹದ ಜೊತಗೆ ತಾನೂ ಅಭಿವೃದ್ಧಿಯಾಗುತ್ತ ಸುತ್ತಮುತ್ತಲಿನ ಪ್ರದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುತ್ತಿರುವುದು ಹೆಮ್ಮಯ ವಿಷಯ ಎಂದು ಶಿವಪ್ರಕಾಶ ರತ್ನಮ್ ನುಡಿದರು.