ಬಾಗಲಕೋಟೆ : ಮುಂಬರುವ ದಿನಗಳಲ್ಲಿ ಸಿಎಂ ಬದಲಾವಣೆಯಾಗುವುದು ಖಂಡಿತ. ನಾನು ಕೂಡ ಸಿಎಂ ಲಿಸ್ಟ್ನಲ್ಲಿ ಇದ್ದೇನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಜಮಖಂಡಿ ತಾಲೂಕಿನ ತುಬಚಿ ಗ್ರಾಮದಲ್ಲಿ ಪಂಚಮಸಾಲಿ ಸಮಾಜದ ಶರಣು ಶರಣಾರ್ಥಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪನವರ ಅಕ್ಕ-ಪಕ್ಕದಲ್ಲಿ ಇರುವವರು ಅವರಿಗೆ ಸರಿಯಾದ ಮಾಹಿತಿ ನೀಡದೆ ದಾರಿ ತಪ್ಪಿಸುತ್ತಿದ್ದಾರೆ. ಯಡಿಯೂರಪ್ಪನವರು ಸಿಎಂ ಸ್ಥಾನ ಬಿಟ್ಟರೆ, ನಾವು ಕೂಡ ಸಿಎಂ ಆಗಬಹುದು. ಸಿಎಂ ಆಗುವವರ ಲಿಸ್ಟ್ನಲ್ಲಿ ನಾವು ಕೂಡ ಇದ್ದೇವೆ ಎಂದರು.
ಸಿಎಂ ಆಗುವ ಇಂಗಿತ ವ್ಯಕ್ತಪಡಿಸಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಮ್ಮ ಸರ್ಕಾರದಲ್ಲಿ ಕೆಲವು ಡುಬ್ಲಿಕೇಟ್ ಸಚಿವರಿದ್ದು, ಸಮಾಜವನ್ನು ತಪ್ಪು ದಾರಿಗೆ ಎಳೆಯುವುದಕ್ಕೆ ಪ್ರಯತ್ನ ಮಾಡುತ್ತಿದ್ದಾರೆ. ಅವರಿಗೆ ಸಮಾಜ ತಕ್ಕ ಪಾಠ ಕಲಿಸುತ್ತದೆ. ರೈತರು ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಕೆ ಮಾಡಿದರೂ ಬಿಲ್ ಕೊಡುವ ಯೋಗ್ಯತೆ ಇಲ್ಲ. ಸುಮ್ಮನೆ ಸಮಾಜದ ದಾರಿ ತಪ್ಪಿಸುವ ಕುತಂತ್ರಕ್ಕೆ ಕೈ ಹಾಕುತ್ತಿದ್ದಾರೆ ಎಂದು ಪರೋಕ್ಷವಾಗಿ ಸಚಿವ ಮುರುಗೇಶ್ ನಿರಾಣಿಗೆ ಟಾಂಗ್ ನೀಡಿದರು.
ಓದಿ : ಮತ್ತೆ ಅದೇ ರಾಗ.. ರಾಜ್ಯದಲ್ಲಿ ಸಿಎಂ ಬದಲಾವಣೆ ಪರ್ವ ಸದ್ಯದಲ್ಲೇ ಪ್ರಾರಂಭ: ಯತ್ನಾಳ್
ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುತ್ತೇವೆಂದು ಮುಖ್ಯಮಂತ್ರಿ ಸದನದಲ್ಲಿ ಭರವಸೆ ನೀಡಿದ್ದಾರೆ. ಮುಖ್ಯಮಂತ್ರಿಗಳ ಮೇಲೆ ಸಂಪೂರ್ಣ ಭರವಸೆ ಇದೆ. ಒಂದು ವೇಳೆ ತಪ್ಪಿದರೆ 20 ಲಕ್ಷ ಪಂಚಮಸಾಲಿ ಸಮಾಜದ ಜನರು ಬೃಹತ್ ಪ್ರತಿಭಟನೆ ಮಾಡುತ್ತೇವೆ ಎಂದು ಸರ್ಕಾರಕ್ಕೆ ಯತ್ನಾಳ್ ಎಚ್ಚರಿಕೆ ರವಾನಿಸಿದರು.