ಹಂಸಲೇಖಗೆ ಲಿಂಗಾನಂದ ಶ್ರೀ ಪ್ರಶಸ್ತಿ ಪ್ರದಾನ ಬಾಗಲಕೋಟೆ:ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರಿಗೆ 37ನೇ ಶರಣ ಮೇಳ ಕಾರ್ಯಕ್ರಮದಲ್ಲಿ ರಾಷ್ಟ್ರ ಮಟ್ಟದ ಸ್ವಾಮಿ ಲಿಂಗಾನಂದ ಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಸಾಮಾಜಿಕ ಕಾಂತ್ರಿಕಾರಿ ಬಸವಣ್ಣನವರು ಐಕ್ಯ ಸ್ಥಳವಾಗಿರುವ ಕೂಡಲಸಂಗಮದಲ್ಲಿ ಬಸವ ಧರ್ಮ ಪೀಠದಿಂದ 37ನೇ ಶರಣ ಮೇಳ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ಸಿಕ್ಕಿದೆ.
ಶರಣ ಮೇಳದಲ್ಲಿ ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಗಂಗಾಮಾತಾಜೀ ಅವರ ಸಾನಿಧ್ಯದಲ್ಲಿ ಹಂಸಲೇಖ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಪ್ರಶಸ್ತಿಯು 1 ಲಕ್ಷ ರೂ. ಗೌರವ ಧನ ಮತ್ತು ಸ್ಮರಣಿಕೆ ಹೊಂದಿದೆ. ಬಳಿಕ ಮಾತನಾಡಿದ ಹಂಸಲೇಖ ಅವರು, ಉತ್ತರ ಕರ್ನಾಟಕ ಶರಣ ನಾಡು ಆಗಿದ್ದು, ಇಲ್ಲಿನ ಜನ ಉತ್ತರ ಮಾತ್ರ ನೀಡುತ್ತಾರೆ. ಪ್ರಶ್ನೆಯೇ ಮಾಡಲ್ಲ. ಕೂಡಲಸಂಗಮ ಹಾಗೂ ಆಲಮಟ್ಟಿಯು ರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಬೇಕಾಗಿದೆ. ಈ ನಿಟ್ಟಿನಲ್ಲಿ ನಾವು ಯಾವಾಗ ಕರೆದರು ಬರುತ್ತೇನೆ, ನಿಮ್ಮ ಜೊತೆಗೆ ಇರುತ್ತೇನೆ ಎಂದರು.
ಇದೇ ವೇಳೆ ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್ ಅವರಿಗೆ ರಾಷ್ಟ್ರ ಮಟ್ಟದ ಬಸವಾತ್ಮಜೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಪ್ರಶಸ್ತಿಯು ಸ್ಮರಣಿಕೆ ಹಾಗೂ 50 ಸಾವಿರ ರೂ ಗೌರವಧನ ಹೊಂದಿದೆ. ಬಳಿಕ ಮೇಧಾ ಪಾಟ್ಕರ್ ಮಾತನಾಡಿ, ವಿಶ್ವಗುರು ಅಂದರೆ ಯಾರು ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ. ವಿಶ್ವಗುರು ಬಸವಣ್ಣನವರು 12ನೇ ಶತಮಾನದಲ್ಲಿ ಜಾತಿ ನಿರ್ಮೂಲನೆಗೆ ಹೋರಾಟ ಮಾಡಿದ್ದರು. ಜಾತಿ ನಿರ್ಮೂಲನೆಗೆ ಅವರ ಯೋಗದಾನ ಮಾತ್ರವಲ್ಲ ಜೀವದಾನವೂ ಇದೆ. ಇದಕ್ಕಾಗಿ ತಮ್ಮ ಪ್ರಾಣ ತ್ಯಾಗ ಮಾಡಿದ್ದರು ಎಂದು ಹೇಳಿದರು.
ಬಸವಣ್ಣನವರ ವಿಚಾರ ಧಾರೆಗಳನ್ನು ನಾವೆಲ್ಲ ಪಾಲಿಸಬೇಕಿದೆ. ಭಾರತದ ಧ್ವಜದಲ್ಲಿ ಮೂರು ಬಣ್ಣಗಳಿವೆ. ಸಮಾನತೆಯ ತತ್ವವನ್ನ ಸಾರುತ್ತವೆ. ಆದರೂ ಇಂದಿನ ದಿನಮಾನಗಳಲ್ಲಿ ಜಾತಿಧರ್ಮದ ಹೆಸರಿನಲ್ಲಿ ಗಲಾಟೆಗಳು ನಡೆಯುತ್ತಿರುವುದು ದುರದೃಷ್ಟಕರ. ಇಂದಿನ ದಿನಮಾನಗಳಲ್ಲಿ ಅತ್ಯಾಚಾರ ಘಟನೆಗಳು ನಡೆಯುತ್ತಿವೆ, ಆರೋಪಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಾರೆ ಎಂದು ಮೇಧಾ ಪಾಟ್ಕರ್ ವಿಷಾದ ವ್ಯಕ್ತಪಡಿಸಿದರು.
ಶರಣ ಮೇಳಕ್ಕೆ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತಾನಾಡಿದ ಸಿಎಂ ಸಿದ್ದರಾಮಯ್ಯ, 12ನೇ ಶತಮಾನದಲ್ಲಿ ಬಸವಾದಿ ಶರಣರು ಈ ನಾಡಿನಲ್ಲಿ ಸಾಮಾಜಿಕ ಕ್ರಾಂತಿ ಮಾಡಿದ್ದರು. ಸಾಮಾಜಿಕ ವ್ಯವಸ್ಥೆ ಅಂದು ಇಂದೂ ಕೂಡ ಇದೆ. ಆದರೆ ಸ್ವಾರ್ಥಕ್ಕಾಗಿ ನಾವೆಲ್ಲ ಜಾತಿ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಪಟ್ಟಬದ್ಧ ಹಿತಾಸಕ್ತಿಗಳು ತಮ್ಮ ಸ್ವಾರ್ಥಕ್ಕೆ ಬಹುಸಂಖ್ಯಾತರನ್ನು ಅಕ್ಷರ ಸಂಸ್ಕೃತಿಯಿಂದ ದೂರ ಮಾಡಿದ್ದಾರೆ. ಅಕ್ಷರ ಸಂಸ್ಕೃತಿ ಸಿಕ್ಕವರು ಮೇಲ್ವರ್ಗದವರು ಅಂತ ಆಗಿ, ಬ್ರಾಹ್ಮಣ, ಕ್ಷತ್ರೀಯ, ವೈಶ್ಯ, ಶೂದ್ರ ಎಂಬ ನಾಲ್ಕು ವರ್ಣಗಳನ್ನು ಮಾಡಿದ್ದರು. ಸಮಾಜದಲ್ಲಿನ ಮೂಢನಂಬಿಕೆ, ಕಂದಾಚಾರಗಳನ್ನು ತೊಡೆದು ಹಾಕುವಂತ ಕೆಲಸ ಆಗಬೇಕಾಗಿದೆ. ಸಮಾಜದಲ್ಲಿನ ಮೇಲುಕೀಳುಗಳನ್ನು ಬಸವಣ್ಣನವರು ತಿರಸ್ಕರಿಸಿದವರು ಎಂದು ತಿಳಿಸಿದರು.
ಇವನಾರವ ಇವನಾರವ, ಇಂವ ನಮ್ಮವ ಎಂದು ಶರಣರು 800 ವರ್ಷಗಳ ಹಿಂದೆ ಹೇಳಿದ್ದಾರೆ. ಆದರೇ ಇದೂವರೆಗೂ ಜಾತಿ ನಿರ್ಮೂಲನೆ ಆಗಿದೆಯಾ? ಜಾತಿ ನಿರ್ಮೂಲನೆ ಮಾಡಲು ಶರಣರಿಗೆ ಮಾತ್ರ ಸಾಧ್ಯ. ಯಾವ ವ್ಯವಸ್ಥೆಗೆ ಸಾಮಾಜಿಕ ಅರ್ಥಿಕ ಶಕ್ತಿ ಬರುತ್ತದೆಯೋ ಬದಲಾವಣೆ ಸಾಧ್ಯ. ಹೀಗಾಗಿ ಶರಣ ಮೇಳ ಅಂದರೇ ಮನುಷ್ಯರ ಮೇಳ, ಮಾನವತ್ವದ ಮೇಳ. ಮನುಷ್ಯ ಮನುಷ್ಯನಾಗಿರಬೇಕು ಎಂದು ಕುವೆಂಪು ಅವರು ಹೇಳಿದ ಹಾಗೆ ಹುಟ್ಟವಾಗ ಎಲ್ಲರೂ ವಿಶ್ವ ಮಾನವ ಆಗಿರುತ್ತಾರೆ. ಬೆಳೆದಂತೆ ಅಲ್ಪ ಮಾನವರಾಗುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.
ಇದನ್ನೂ ಓದಿ :ಬಾಗಲಕೋಟೆ: ವಿಶೇಷ ರೀತಿಯಲ್ಲಿ ಸಂಕ್ರಾಂತಿ ಹಬ್ಬ ಆಚರಿಸಿದ ಮಹಿಳೆಯರು