ಬಾಗಲಕೋಟೆ:ಮೊಹರಂ ಹಬ್ಬವು ಜಿಲ್ಲೆಯಾದ್ಯಂತ ಸಂಭ್ರಮ ಸಡಗರದಿಂದ ಆಚರಣೆ ಮಾಡಲಾಗುತ್ತಿದೆ. ಈ ಮಧ್ಯೆ ಬೀಳಗಿ ತಾಲೂಕಿನ ಗಿರಿಸಾಗರ ಗ್ರಾಮದಲ್ಲಿ ಹಬ್ಬವು ಗಮನ ಸೆಳೆಯಿತು. ಮಸೀದಿಯಲ್ಲಿ ಆಕರ್ಷಣೀಯ ರಾಮ-ಸೀತೆ, ಲಕ್ಷ್ಮಣ, ಹನುಮಂತ ವೇಷಧಾರಿಗಳು ಹಾಗೂ ಅಯೋಧ್ಯೆ ರಾಮ ಮಂದಿರ ನಿರ್ಮಾಣ ಮಾಡಿ ಭಾವೈಕ್ಯತೆ ಸಾರಿದ್ದಾರೆ.
ಹಿಂದೂ-ಮುಸ್ಲಿಂ ಜನಾಂಗದವರು ಒಗ್ಗಟ್ಟಿನಿಂದ ಪ್ರತಿ ವರ್ಷ ವಿಶೇಷವಾಗಿ ಹಬ್ಬವನ್ನು ಆಚರಣೆ ಮಾಡುವ ಮೂಲಕ ಗಮನ ಸೆಳೆಯುತ್ತಾರೆ. ಈ ಹಿನ್ನೆಲೆ
ಮಸೀದಿಯಲ್ಲಿ ದೀಪಾಲಂಕಾರ ಮಧ್ಯೆ ಅಯೋಧ್ಯೆ ರಾಮ ಮಂದಿರ ನಿರ್ಮಾಣ ಮಾಡಿ, ಅದಕ್ಕೂ ವಿದ್ಯುತ್ ದೀಪದ ಅಲಂಕಾರ ಮಾಡಿದ್ದಾರೆ.
ತಾರತಮ್ಯ ಮರೆತು ಅನ್ಯೋನ್ಯತೆಯ ಸಂದೇಶ ಸಾರಿದ್ದಾರೆ. ಇದರ ಜೊತೆಗೆ ಹಿರೆ ಶೇಲ್ಲಿಕೇರಿ ಗ್ರಾಮದಲ್ಲಿಯೂ ಮೊಹರಂ ಹಬ್ಬದ ಆಚರಣೆ ಜೋರಾಗಿತ್ತು. ಇಂದಿನ ಆಧುನಿಕ ಯುಗದಲ್ಲಿ ಮರೆಯಾಗುತ್ತಿರುವ ಹೆಜ್ಜೆ ಮೇಳ ಹಾಗೂ ಮೊಹರಂ ಹಬ್ಬದ ಹಾಡುಗಳನ್ನು ಹಾಡಿ ಗಮನ ಸೆಳೆಯಲಾಯಿತು.