ಬಾಗಲಕೋಟೆ :ಗಂಡು ಮಗು ಆಗಿಲ್ಲವೆಂಬ ಕೊರಗಿನಿಂದ ಮಹಿಳೆಯೊಬ್ಬರು ತನ್ನ ಮೂವರು ಮಕ್ಕಳೊಂದಿಗೆಆತ್ಮಹತ್ಯೆ ಯತ್ನಿಸಿದ ಘಟನೆ ಜಮಖಂಡಿ ತಾಲೂಕಿನ ಕುಂಬಾರ ಹಳ್ಳ ಗ್ರಾಮದಲ್ಲಿ ಇಂದು ನಡೆದಿದೆ. ಇಬ್ಬರು ಹೆಣ್ಣು ಮಕ್ಕಳು ಹಾಗು ಒಂದು ಗಂಡು ಮಗು ಘಟನೆಯಲ್ಲಿ ಸಾವನ್ನಪ್ಪಿವೆ. ಕುಂಬಾರಹಳ್ಳ ಗ್ರಾಮದ ಮಹಿಳೆ ಸಂಗೀತಾ ಹನಮಂತ ಗುಡೆಪ್ಪಗೋಳ (28) ಬದುಕುಳಿದಿದ್ದಾರೆ.
ಜಮಖಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಸ್ಥಳಕ್ಕೆ ಪಿಎಸ್‌ಐ ಮಹೇಶ ಸಂಖ, ಸಿಪಿಐ ಮಲ್ಲಪ್ಪ ಮಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ, ಎರಡು ಹೆಣ್ಣು ಮಕ್ಕಳಾಗಿರುವುದರಿಂದ ನೊಂದ ಸಂಗೀತಾ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ.
ಮನನೊಂದು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ:ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಮುದಗಲ್ ಮ್ಯಾಗಳಪೇಟೆಯಲ್ಲಿ ಕೌಟುಂಬಿಕ ಕಲಹದಿಂದ ಮನನೊಂದು ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆ ಆಗಸ್ಟ್ 10ರಂದು ನಡೆದಿತ್ತು. ಚೌಡಮ್ಮ (26), 4 ಹಾಗೂ 2 ವರ್ಷದ ಮಕ್ಕಳು ಮೃತರು. ಗುರುವಾರ ಪತಿ ಹುಲಿಗೆಪ್ಪ ಹಾಗೂ ಪತ್ನಿ ಚೌಡಮ್ಮ ಇಬ್ಬರ ಮಧ್ಯೆ ಮನೆಯಲ್ಲಿ ಜಗಳ ನಡೆದಿತ್ತು. ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು. ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಡೆತ್ ನೋಟ್ ಬರೆದಿಟ್ಟು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ: ಕೋಲಾರ ತಾಲೂಕಿನ ಉಪ್ಪುಕುಂಟೆ ಗ್ರಾಮದಲ್ಲಿ ಡೆತ್ ನೋಟ್ ಬರೆದು ತನ್ನಿಬ್ಬರು ಮಕ್ಕಳೊಂದಿಗೆ ತಾಯಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆ ಜೂನ್ 20ರ ಮಂಗಳವಾರ ನಡೆದಿತ್ತು. ಮೃತರನ್ನು ಸುಗುಣ (26), ಮಕ್ಕಳಾದ ಪ್ರೀತಂ ಗೌಡ (9) ಮತ್ತು ನಿಶಿತಾ ಗೌಡ ಎಂದು ಗುರುತಿಸಲಾಗಿತ್ತು. ಮತ್ತೊಂದೆಡೆ ಮಹಿಳೆಯ ಪತಿ ಹಾಗೂ ಮನೆಯವರ ಕಿರುಕುಳವೇ ಕಾರಣ ಎಂಬ ಆರೋಪ ಕೇಳಿಬಂದಿತ್ತು. ಸುಗುಣ ಅವರು ಮುರಳಿ ಎಂಬವರನ್ನು ಮದುವೆಯಾಗಿದ್ದರು. ಇಬ್ಬರು ಸರ್ಕಾರಿ ಬಸ್ ಡಿಪೋದಲ್ಲಿ ಕೆಲಸ ಮಾಡುತ್ತಿದ್ದರು. ಮುರಳಿ ಸರ್ಕಾರಿ ಬಸ್ ಡಿಪೋದಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದರೆ, ಸುಗುಣ ಮೆಕ್ಯಾನಿಕ್ ಕೆಲಸ ಮಾಡುತ್ತಿದ್ದರು. ಆತ್ಮಹತ್ಯೆ ನಡೆದ ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದ ಕೋಲಾರ ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದರು.
ಗೃಹಿಣಿ ಆತ್ಮಹತ್ಯೆ: ಪತಿ ಹಾಗೂ ಆತನ ಗರ್ಲ್ ಫ್ರೆಂಡ್ ವಿರುದ್ಧ ಡೆತ್ ನೋಟ್ ಬರೆದಿಟ್ಟು ಗೃಹಿಣಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದ ಘಟನೆ ಜುಲೈ 2ರಂದು ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಪವಿತ್ರಾ ಆತ್ಮಹತ್ಯೆಗೆ ಶರಣಾದ ಮಹಿಳೆ. ಹೆಗ್ಗನಹಳ್ಳಿ ನಿವಾಸಿಯಾಗಿದ್ದ ಪವಿತ್ರಾಗೆ ಇದು ಎರಡನೇ ಮದುವೆಯಾಗಿತ್ತು. ಮೊದಲ ಪತಿಯೊಂದಿಗೆ ಕೌಟುಂಬಿಕ ಕಲಹ ಏರ್ಪಟ್ಟಿದ್ದರಿಂದ ಇಬ್ಬರೂ ಪರಸ್ಪರ ಸಮ್ಮತಿಯೊಂದಿಗೆ ವಿಚ್ಛೇದನ ಪಡೆದಿದ್ದರು.
ಬಳಿಕ ಖಾಸಗಿ ಕಂಪನಿಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಆರಂಭಿಸಿದ್ದ ಪವಿತ್ರ ಅದೇ ಕಂಪನಿಯ ಮಾಲೀಕನಾಗಿರುವ ಚೇತನ್ ಗೌಡ ಎಂಬವರನ್ನು ಪ್ರೀತಿಸಿ ವಿವಾಹವಾಗಿದ್ದರು. ಈ ಮಧ್ಯೆ ತೀವ್ರವಾಗಿ ಮನನೊಂದಿದ್ದ ಪವಿತ್ರಾ, ಗಂಡನೊಂದಿಗೆ ಜಗಳವಾಡಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಮೃತಳ ತಾಯಿ ಪದ್ಮಮ್ಮ ನೀಡಿದ್ದ ದೂರಿನನ್ವಯ ಚೇತನ್ ಗೌಡ ಹಾಗೂ ಅವರ ಪ್ರೇಯಸಿಯ ವಿರುದ್ಧ ಕೆಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ :ಚಿಕ್ಕಬಳ್ಳಾಪುರ: ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ