ಬಾಗಲಕೋಟೆ: ಅನೈತಿಕ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದ ಕಾರಣ ತಾಯಿಯೊಬ್ಬಳು ತನ್ನ ಮಗನನ್ನೇ ಕೊಲೆ ಮಾಡಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಕೊಲೆ ಪ್ರಕರಣ ಭೇದಿಸುವಲ್ಲಿ ಲೋಕಾಪುರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಮುಧೋಳ ತಾಲೂಕಿನ ನಾಗಣಾಪುರ ಗ್ರಾಮದ ವಸಂತ ಮಹಾಲಿಂಗಪ್ಪ ಕುರಬಳ್ಳಿ (28)ಕೊಲೆಯಾದ ವ್ಯಕ್ತಿ. ಆರೋಪಿಗಳಾದ ಮೂಡಲಗಿ ತಾಲೂಕಿನ ರಡ್ಡೇರಹಟ್ಟಿಗ್ರಾಮದ ಲಕ್ಷ್ಮಣ ಉರ್ಫ ಸಿಂಧೂರ ಬೀರನ್ನವರ, ಗೋಕಾಕ್ ತಾಲೂಕಿನ ವೆಂಕಟಾಪುರ ಗ್ರಾಮದ ಭೀಮಪ್ಪ ಮಳಲಿ, ಮುಧೋಳ ತಾಲೂಕಿನ ಜೀರಗಾಳ ಗ್ರಾಮದ ನಿಂಗಪ್ಪ ಬಳಗನ್ನವರ ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಜೊತೆಗೆ ತಾಯಿ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.
ಏನಿದು ಘಟನೆ? : ಆರೋಪಿ ನಿಂಗಪ್ಪ ಬಳಗನ್ನವರ ಜೊತೆ ಕೊಲೆಯಾದ ವಸಂತನ ತಾಯಿಗೆ ಅನೈತಿಕ ಸಂಬಂಧವಿತ್ತು. ಅಷ್ಟೇ ಅಲ್ಲದೆ, ಆಸ್ತಿ ವಿಚಾರವಾಗಿ ವಸಂತನಿಗೂ ಹಾಗೂ ಆತನ ಅಕ್ಕನ ಗಂಡಂದಿರಾದ ಲಕ್ಷ್ಮಣ ಉರ್ಫ ಸಿಂಧೂರ ಬೀರನ್ನವರ, ಭೀಮಪ್ಪ ಮಳಲಿ ಜೊತೆ ಜಗಳವಾಗಿತ್ತು. ಈ ಹಿನ್ನೆಲೆ ನಿಂಗಪ್ಪ, ಲಕ್ಷ್ಮಣ, ಭೀಮಪ್ಪ, ಮತ್ತು ವಸಂತನ ತಾಯಿ ಜೂನ್ 19 ರಂದು ಆತನನ್ನು ಕೊಲೆ ಮಾಡಿ, ಗೋಣಿ ಚೀಲದಲ್ಲಿ ತುಂಬಿಕೊಂಡು ಬಂದು ಸವದತ್ತಿ ತಾಲೂಕಿನ ದಾಸನಾಳ ಗ್ರಾಮದ ಕಾಲುವೆಯಲ್ಲಿ ಎಸೆದು ಹೋಗಿದ್ದರು. ಬಳಿಕ ಜುಲೈ 6 ರಂದು ತಾಯಿಯೇ ನನ್ನ ಮಗ ಕಾಣೆಯಾಗಿದ್ದಾನೆಂದು ಲೋಕಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.