ಬಾಗಲಕೋಟೆ :ಜಿಲ್ಲೆಯ ರಬಕವಿ - ಬನಹಟ್ಟಿ ತಾಲೂಕಿನಾದ್ಯಂತ ನಿರಂತರ ಮಳೆಯಾಗುತ್ತಿರುವುದರಿಂದ ಹಲವು ಅವಾಂತರಗಳು ಸೃಷ್ಟಿಯಾಗಿವೆ. ಮಳೆಗೆ ಮಣ್ಣಿನ ಮನೆಗಳು ಕುಸಿದಿದ್ದು, ಜನರು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ. ಹಾನಿಗೊಳಗಾದ ಮನೆಗಳಿಗೆ ಶಾಸಕ ಸಿದ್ದು ಸವದಿ, ತಹಶೀಲ್ದಾರ್ ಸಂಜಯ ಇಂಗಳೆ ಭೇಟಿ ನೀಡಿದ್ದು, ಹಾನಿಗೊಳಗಾದ ಮನೆಗಳ ಸರ್ವೆ ಕಾರ್ಯ ಮಾಡಿಸಿ ಸೂಕ್ತ ದಾಖಲೆಗಳೊಂದಿಗೆ ಸರ್ಕಾರಕ್ಕೆ ಮಾಹಿತಿ ಒದಗಿಸಿದ್ದಾರೆ.
ಕಳೆದ ಜುಲೈ 25 ರಿಂದ ಕಂದಾಯ ಇಲಾಖೆಯಿಂದ ನಡೆಯುತ್ತಿರುವ ಸರ್ವೆ ಕಾರ್ಯದ ಪ್ರಕಾರ 65 ಮನೆಗಳು ಹಾನಿಗೊಳಗಾಗಿದ್ದು, ಕಳೆದೊಂದು ವಾರದಲ್ಲಿಯೇ 50 ಕ್ಕೂ ಅಧಿಕ ಮನೆಗಳು ಕುಸಿದಿರುವುದಾಗಿ ವರದಿಯಾಗಿದೆ. ಸದ್ಯ ಸೂರಿಲ್ಲದೇ ಪರದಾಡುತ್ತಿರುವ ಕುಟುಂಬಗಳಿಗೆ ಶೀಘ್ರ ಪರಿಹಾರ ಒದಗಿಸುವಂತೆ ಸಂತ್ರಸ್ತರು ಒತ್ತಾಯಿಸಿದ್ದಾರೆ. ಮಳೆಗೆ ಮನೆ ಕುಸಿತ ಅಥವಾ ಇನ್ನಾವುದೇ ಸಮಸ್ಯೆ ಎದುರಾದಲ್ಲಿ ತಕ್ಷಣವೇ ಕಂದಾಯ ಇಲಾಖೆಯ ಸಹಾಯ ವಾಣಿ 08353-230555 ಸಂಖ್ಯೆಗೆ ಸಂಪರ್ಕಿಸುವಂತೆ ಸೂಚಿಸಲಾಗಿದೆ.