ಬಾಗಲಕೋಟೆ: ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಬದಲಾವಣೆ ಚರ್ಚೆಯ ಬಳಿಕ ಕೆಲ ಮಠಾಧೀಶರು ಮುಖ್ಯಮಂತ್ರಿ ಯಡಿಯೂರಪ್ಪನವರ ಪರವಾಗಿ ನಿಂತಿದ್ದರು. ಆದರೆ, ಈಗ ರಾಜ್ಯದಲ್ಲಿ ಹೊಸ ಬೆಳವಣಿಗೆಯೊಂದು ಕಂಡು ಬಂದಿದ್ದು, ಸಚಿವ ಮುರಗೇಶ ನಿರಾಣಿ ಅವರನ್ನು ಮುಖ್ಯಮಂತ್ರಿ ಮಾಡುವ ಉದ್ದೇಶದಿಂದ ಪರೋಕ್ಷವಾಗಿ ಕಾರ್ಯತಂತ್ರ ರೂಪಿಸಲು ಪಂಚಮಸಾಲಿ ಸಮುದಾಯದ 80 ಜನ ಸ್ವಾಮೀಜಿಗಳನ್ನೊಳಗೊಂಡ ಒಕ್ಕೂಟ ಪ್ರಾರಂಭಿಸಲಾಗಿದೆ.
ಈ ಒಕ್ಕೂಟದಿಂದ ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹಾಗೂ ಹರಿಹರ ಪೀಠದ ವಚನಾನಂದ ಸ್ವಾಮೀಜಿಯವರನ್ನು ಹೊರಗಿಟ್ಟಿರುವುದು ಸದ್ಯ ಚರ್ಚೆಯ ವಿಷಯವಾಗಿದೆ.
ಕಳೆದ ದಿನ ಜಮಖಂಡಿ ಪಟ್ಟಣದ ಸಮುದಾಯದ ಮುಖಂಡರೊಬ್ಬರ ಮನೆಯಲ್ಲಿ ಸ್ವಾಮೀಜಿಗಳ ಹೊಸ ಒಕ್ಕೂಟದ ಸಭೆ ನಡೆದಿದೆ. ಈ ಸಭೆಯು ಸಚಿವ ಮುರಗೇಶ ನಿರಾಣಿಯವರ ಬೆಂಬಲದಿಂದ ನಡೆದಿದೆ ಎಂದು ಹೇಳಲಾಗುತ್ತಿದೆಯಾದರೂ ನಿರಾಣಿ ಸಹೋದರರು ಈ ಬಗ್ಗೆ ಮಾತನಾಡಲು ನಿರಾಕರಿಸಿದ್ದಾರೆ.
ಈಗಾಗಲೇ ಪಂಚಮಸಾಲಿ ಸಮುದಾಯದ ಎರಡು ಪೀಠಗಳು ಇವೆ. ಈಗ ಮತ್ತೆ ಮೂರನೆಯ ಒಕ್ಕೂಟ ರಚನೆ ಏಕೆ ಎಂಬ ವಾದ ಸಮುದಾಯದಲ್ಲಿ ನಡೆಯುತ್ತಿದೆ.
ಜಮಖಂಡಿಯಲ್ಲಿ ನೆಲೋಗಿ ಶಿವಾನಂದೇಶ್ವರ ಮಠದ ಸಿದ್ದಲಿಂಗೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಈ ಸಭೆ ನಡೆದಿದ್ದು, ಬಬಲೇಶ್ವರ ಬೃಹನ್ಮಠದ ಮಹಾದೇವ ಸ್ವಾಮೀಜಿ, ಕಕಮರಿ ಗ್ರಾಮದ ರಾಯಲಿಂಗೇಶ್ವರ ಮಠದ ಲಿಂಗಜಂಗಮ ಸ್ವಾಮೀಜಿ, ಕಾಜಿ ಬೀಳಗಿ ಅಕ್ಕಮಹಾದೇವಿ ಸಂಸ್ಥಾನ ಮಠದ ಮಾತಾ ವಚನ ಶ್ರೀ, ಚಿನ್ಮಯಾನಂದ ಸ್ವಾಮೀಜಿ ಸೇರಿದಂತೆ 30 ಕ್ಕೂ ಹೆಚ್ಚು ಸ್ವಾಮೀಜಿಗಳು ಪಾಲ್ಗೊಂಡಿದ್ದರು ಎಂಬ ಮಾಹಿತಿಗಳು ಲಭ್ಯವಾಗಿವೆ.
ಸಭೆಯಲ್ಲಿ ಮಾತನಾಡಿದ ಸಿದ್ದಲಿಂಗೇಶ್ವರ ಸ್ವಾಮೀಜಿ, ಪೀಠದ ಜಗದ್ಗುರುಗಳು ಎಂದು ಕರೆಸಿಕೊಳ್ಳುವ ಸ್ವಯಂ ಘೋಷಿತ ಸ್ವಾಮೀಜಿಗಳನ್ನು ನಾವು ಸಂಪರ್ಕಸಿಲ್ಲ. ಪ್ರತಿಷ್ಠ ಇಟ್ಟುಕೊಂಡವರು ಸಹ ನಮಗೆ ಬೇಕಾಗಿಲ್ಲ. ಇಂಥವರಿಂದ ಸಮಾಜ ಉದ್ದಾರ ಆಗುವುದಿಲ್ಲ. ಒಕ್ಕೂಟದಲ್ಲಿ ನಾನು ಎನ್ನುವ ಸ್ವಾಮೀಜಿಗಳಿಗೆ ಅವಕಾಶವಿಲ್ಲ ಎಂದರು.
ಎಲ್ಲ 80 ಜನ ಪಂಚಮಸಾಲಿ ಸ್ವಾಮೀಜಿಗಳು ಸ್ವಯಂ ಪ್ರೇರಿತರಾಗಿ ಸಭೆಗೆ ಬಂದಿದ್ದಾರೆ. ಇದು ಪಂಚಮಸಾಲಿ ಪೀಠಗಳಿಗೆ ಪರ್ಯಾಯವಲ್ಲ ಹಾಗೂ ಪೀಠಕ್ಕೂ ನಮಗೂ ಸಂಬಂಧವಿಲ್ಲ. ನಾವು ಶ್ರೀಮಂತರ ಮನೆಗೆ ಹೋಗಿಲ್ಲ. ಬಡವರ ಗುಡಿಸಲಿಗೆ ಹೋಗಿ ಅವರ ನೋವುಗಳಿಗೆ ಸ್ಪಂದಿಸುವ ಒಕ್ಕೂಟ ಇದಾಗಿದೆ ಎಂದು ಎರಡೂ ಪೀಠದ ಸ್ವಾಮೀಜಿಗಳಿಗೆ ವಿರೋಧದ ಸಂದೇಶ ರವಾನಿಸಿದರು.