ಬಾಗಲಕೋಟೆ : ಕೊರೊನಾ 2ನೇ ಅಲೆ ತಡೆಯುವಲ್ಲಿ ಮೋದಿ ಮತ್ತು ಯಡಿಯೂರಪ್ಪ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗುಡುಗಿದ್ದಾರೆ.
ಜಿಲ್ಲೆಯ ಬಾದಾಮಿ ಪಟ್ಟಣದಲ್ಲಿ ಕೊರೊನಾ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 2ನೇ ಅಲೆಯ ಬಗ್ಗೆ ಮಾಹಿತಿ ಇದ್ದರೂ ಸರ್ಕಾರ ಜಾಗೃತಿ ವಹಿಸಲಿಲ್ಲ. ಆಕ್ಸಿಜನ್, ರೆಮ್ಡೆಸಿವಿರ್ ಪೂರೈಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಅದು ನಮ್ಮ ರೋಗವಲ್ಲ, ಬಿಜೆಪಿಯವರಿಗೆ ಬಂದ ರೋಗ, ಬಿಜೆಪಿ ಅವರು ಬೀದಿ ಜಗಳ ಮಾಡುತ್ತಿದ್ದಾರೆ, ಮಾಡಲಿ ಅವರ ಜಗಳದಿಂದ ರಾಜ್ಯದಲ್ಲಿ ಮೊದಲೇ ಆಡಳಿತ ಇಲ್ಲ.
ಇನ್ನಷ್ಟು ಆಡಳಿತ ಕುಸಿದು ಹೋಗುತ್ತೇ ಎಂದ ಅವರು, ಸಿಎಂ ಬದಲಾವಣೆ ಆಗುತ್ತೇ ಅಂತ ನನಗೆ ಮಾಹಿತಿ ಇದೆ. ಕೊರೊನಾ ಹಿನ್ನೆಲೆ ಮುಂದಕ್ಕೆ ಹಾಕುತ್ತಾ ಇರಬೇಕು ಎಂದು ತಿಳಿಸಿದರು.
ಇದೇ ಸಮಯದಲ್ಲಿ ಹಕ್ಕುಚ್ಯುತಿ ಮಂಡನೆ ವಿಚಾರವಾಗಿ ಮಾತನಾಡಿ, ಜಿಲ್ಲಾಧಿಕಾರಿಗಳ ಜೊತೆ ಝೂಮ್ ಮೀಟ್ಗೆ ಅವಕಾಶ ಕೇಳಿದ್ದೆ. ಕೊಡೋಕೆ ಆಗಲ್ಲ ನೀವು ಸಕಾ೯ರದ ಭಾಗವಲ್ಲ ಅಂದ್ರು.
ನಾನೊಬ್ಬ ವಿರೋಧ ಪಕ್ಷದ ನಾಯಕ, ನಾನು ಎಕ್ಸ್ ಚೀಫ್ ಮಿನಿಸ್ಟರ್. ಅಪೋಜಿಷನ್ ಲೀಡರ್ ಅಂದ್ರೆ, ಶ್ಯಾಡೋ ಆಫ್ ಚೀಫ್ ಮಿನಿಸ್ಟರ್ ಇದ್ದಂಗೆ.
ನನಗೆ ಮಾಹಿತಿ ತಗೋಳ್ಳೋಕೆ ಆಗಲ್ಲ ಅಂದ್ರೆ ಪ್ರಜಾಪ್ರಭುತ್ವ ವ್ಯವಸ್ಥೆನಾ ಇದು ಎಂದು ಪ್ರಶ್ನೆ ಮಾಡಿದರು. ಅದಕ್ಕಾಗಿ ಹಕ್ಕು ಚ್ಯುತಿ ಮಂಡನೆ ಬಗ್ಗೆ ಹೇಳಿದ್ದೇನೆ ಎಂದರು.
ಬಾದಾಮಿ ಮತಕ್ಷೇತ್ರದಲ್ಲಿ ಪ್ರವಾಸ :ಬಾದಾಮಿ ಮತಕ್ಷೇತ್ರದಲ್ಲಿ ಪ್ರವಾಸ ಹಮ್ಮಿಕೊಂಡ ಅವರು, ಕೊರೊನಾ ಸೋಂಕು ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿರುವ ಬಗ್ಗೆ ಮಾಹಿತಿ ಪಡೆದುಕೊಂಡರು.
ಮೈಸೂರಿನ ಪರೋಪಕಾರಿ ಫೌಂಡೇಶನ್ ಹಾಗೂ ಸಿದ್ದರಾಮಯ್ಯನವರ ಅಭಿಮಾನಿಗಳ ಬಳಗ ವತಿಯಿಂದ ಸರ್ಕಾರಿ ಆಸ್ಪತ್ರೆಗಳಿಗೆ 100 ಬೆಡ್ ಹಾಗೂ ಮಂಚ ವಿತರಣೆ ಮಾಡಿದರು. ಬಾದಾಮಿ, ಗುಳೇದಗುಡ್ಡ ಹಾಗೂ ಕೆರೂರು ಪಟ್ಟಣದಲ್ಲಿರುವ ಸರ್ಕಾರಿ ಆಸ್ಪತ್ರೆಗಳಿಗೆ ಬೆಡ್ ಹಾಗೂ ಮಂಚಗಳನ್ನು ವಿತರಿಸಿದರು.
ಈ ಸಮಯದಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಬಾದಾಮಿ ತಾಲೂಕಿನ ಆಸ್ಪತ್ರೆಯ ಸ್ಥಿತಿಗತಿಗಳ ಬಗ್ಗೆ ಹಾಗೂ ಕೊರೊನಾ ಸೋಂಕಿತರಿಗೆ ಮಾಡಿರುವ ಅನುಕೂಲತೆಗಳ ಬಗ್ಗೆ ವಿಚಾರಿಸಿದರು.
ಆಕ್ಸಿಜನ್ ಕೊರತೆಯಿಂದಾಗಿ ಸಾವು-ನೋವು ಆಗಿವೆಯೇ ಎಂದು ಅಧಿಕಾರಿಗಳನ್ನು ಅವರು ಪ್ರಶ್ನೆ ಮಾಡಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿ ಡಾ.ಅನಂತ ದೇಸಾಯಿ, ಆಕ್ಸಿಜನ್ ಕೊರತೆಯಿಂದಾಗಿ ಯಾವುದೇ ಸಾವು ಸಂಭವಿಸಿಲ್ಲ ಎಂದು ತಿಳಿಸಿದರು.
ಓದಿ:ಮೈಸೂರು ವಿವಿ ಮಹತ್ವದ ನಿರ್ಧಾರ: ಕೊರೊನಾದಿಂದ ಸಂಕಷ್ಟಕ್ಕೆ ಒಳಗಾದ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ