ಬಾಗಲಕೋಟೆ:ಮೋದಿ ಹಾಗೂ ಅಮಿತ್ ಶಾಗೆ ಬಿಎಸ್‌ವೈ ಮೋಸ್ಟ್ ಅನ್ ವಾಂಟೆಡ್ ಚೈಲ್ಡ್ (ಬೇಡವಾದ ಮಗು). ಯಡಿಯೂರಪ್ಪ ನೋಡಿದ್ರೆ ಅಯ್ಯೋ ಪಾಪ ಅನಿಸುತ್ತೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ವಿಪಕ್ಷ ನಾಯಕ ಸಿದ್ದರಾಮಯ್ಯ.. ಬಾದಾಮಿ ತಾಲೂಕಿನ ಹಂಗರಗಿ ಗ್ರಾಮದಲ್ಲಿ ಮಾಧ್ಯಮ ಪತ್ರಿನಿಧಿಗಳೊಂದಿಗೆ ಮಾತನಾಡಿದ ಅವರು, ಸರ್ಕಾರಕ್ಕೆ ಪೂರ್ಣ ಬಹುಮತ ಬೇಕಾದ್ರೆ 113 ಸ್ಥಾನ ಬೇಕು. ಇವರ ಬಳಿ ಎಷ್ಟಿವೆ? ಕೇವಲ 105 ಇವೆ. ಉಪಚುನಾವಣೆ ಬಳಿಕ ರಾಜೀನಾಮೆ ಕೊಡುವ ಪರಿಸ್ಥಿತಿ ಬರುತ್ತೆ ಎನ್ನುವ ಮೂಲಕ ಮಧ್ಯಂತರ ಚುನಾವಣೆ ಬರುತ್ತೆ ಎಂಬ ಮುನ್ಸೂಚನೆ ನೀಡಿದರು.
ಇದೇ ವೇಳೆ ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಅನೈತಿಕವಾದ ಸರ್ಕಾರ. ಹಿಂಬಾಗಿಲಿನಿಂದ ಬಂದು ಸರ್ಕಾರ ಮಾಡ್ತಾ ಇರೋದು. ಜನರ ಆಶೀರ್ವಾದ ತೆಗೆದುಕೊಂಡು ಬಂದಿದ್ದಾರಾ?. ಕುದುರೆ ವ್ಯಾಪಾರ ಮಾಡಿ, ಶಾಸಕರ ರಾಜೀನಾಮೆ ಕೊಡಿಸಿ ಅನೈತಿಕವಾಗಿ ಸರ್ಕಾರ ರಚನೆ ಮಾಡಿದ್ದಾರೆ. ಹೀಗಾಗಿ ಜನರ ಆಶೀರ್ವಾದ ಯಾರ ಮೇಲೆ ಇರುತ್ತೋ ಅವ್ರು ಅಧಿಕಾರಕ್ಕೆ ಬರ್ತಾರೆ ಎಂದರು.
ಇನ್ನು, ಡಿಕೆಶಿ ಬೇಲ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಜಾಮೀನು ಸಿಕ್ಕಿರೋದು ಸಂತೋಷ ಉಂಟುಮಾಡಿದೆ. ಅವರು ಏಳು ಬಾರಿ ಶಾಸಕರಾಗಿದ್ದವರು. ಈ ಮೊದಲೇ ಅವರಿಗೆ ಜಾಮೀನು ಸಿಗಬೇಕಿತ್ತು. ಇಡಿ ಕೋರ್ಟ್ನಿಂದಲೇ ಅವರಿಗೆ ಜಾಮೀನು ಕೊಡಬೇಕಾಗಿತ್ತು. ಆದರೆ, ಹೈಕೋರ್ಟ್‌ನಲ್ಲಿ ಜಾಮೀನು ಸಿಕ್ಕಿದೆ.
ನ್ಯಾಯ ಸಿಕ್ಕಿದೆ ಅನ್ನೋ ಸಂತೋಷ ಇದೆ. ಕೋರ್ಟ್‌ನಲ್ಲಿ ತಪ್ಪಿತಸ್ಥ ಅಂತಾ ತೀರ್ಮಾನ ಆದ ಮೇಲೆ ಜೈಲಿಗೆ ಕಳಿಸಲಿ. ತನಿಖಾ ಹಂತದಲ್ಲೇ ಜೈಲಿಗೆ ಕಳಿಸೋದು ಸರಿಯಾದ ಕ್ರಮವಲ್ಲ. ದ್ವೇಷದ ರಾಜಕಾರಣ, ಯಾವತ್ತೂ ಒಳ್ಳೆಯದಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರ ಬರುತ್ತೆ, ಹೋಗುತ್ತೆ ಎನ್ನೊ ಮೂಲಕ ತೀಕ್ಷ್ಣವಾಗಿ ಬಿಜೆಪಿ ನಾಯಕರಿಗೆ ಚಾಟಿ ಬೀಸಿದರು.