ಬಾಗಲಕೋಟೆ: ಪ್ರಧಾನಿ ಮೋದಿ ತಮ್ಮ ಮನ್ ಕೀ ಬಾತ್‌ನಲ್ಲಿ ಯಾವ ವಿಷಯದ ಬಗ್ಗೆ ಪ್ರಸ್ತಾಪಿಸುತ್ತಾರೆ, ಅವುಗಳಿಗೆ ಬೇಡಿಕೆ ಹೆಚ್ಚಾಗುತ್ತದೆ. ಹಿಂದೆ ಕೊಪ್ಪಳ ಜಿಲ್ಲೆಯ ಕಿನ್ನಾಳ ಗೊಂಬೆ ತಯಾರಿಕೆ, ಚನ್ನಪಟ್ಟಣ ಗೊಂಬೆ ತಯಾರಿಕೆ ಬಗ್ಗೆ ಮಾತನಾಡಿದ್ದರು. ಅವುಗಳ ಬೇಡಿಕೆ ಹಾಗೂ ದರ ಏರಿಕೆಯಾಗಿತ್ತು. ಅದೇ ರೀತಿ ಈಚೆಗೆ ಮುಧೋಳ ಶ್ವಾನದ ಬಗ್ಗೆ ಮಾತನಾಡಿದ್ದರು. ಇದರಿಂದ ಮುಧೋಳ ಶ್ವಾನಗಳಿಗೆ ಬೇಡಿಕೆ ಹೆಚ್ಚಾಗಿದೆ. ಎರಡು ಪಟ್ಟು ದರ ಕೂಡಾ ಏರಿಕೆಯಾಗಿದೆ. ಈ ಶ್ವಾನದ ಹೆಣ್ಣು ಮರಿಗಳಿಗೆ 9 ಸಾವಿರ ರೂಪಾಯಿಗಳವರೆಗೆ, ಗಂಡು ಇದ್ದಲ್ಲಿ 10 ಸಾವಿರ ದರಕ್ಕೆ ಮಾರಾಟ ಮಾಡಲಾಗುತ್ತಿತ್ತು. ಈಗ ಮನ್ ಕೀ ಬಾತ್ ಕಾರ್ಯಕ್ರಮದ ನಂತರ 18 ಸಾವಿರ ದಿಂದ 20 ಸಾವಿರ ರೂಪಾಯಿಗಳವರೆಗೆ ಏರಿಕೆಯಾಗಿದೆ.
ಮನ್ ಕೀ ಬಾತ್ ಪ್ರಸಾರದ ಬಳಿಕ ಮುಧೋಳ ಶ್ವಾನಗಳಿಗೆ ಬೇಡಿಕೆ ಶ್ವಾನ ಸಾಗಾಣಿಕೆ ಮತ್ತು ಮಾರಾಟ ಮಾಡುತ್ತಿದ್ದ ರೈತರು ಮೊಗದಲ್ಲಿ ಸಂತಸ ಮೂಡಿದೆ. ಹೌದು, ಸಪೂರ ದೇಹ ಹೊಂದಿರುವ ಈ ಶ್ವಾನ ಮುಧೋಳ ಹೌಂಡ್ ಅಂತನೇ ಪ್ರಸಿದ್ದವಾಗಿದೆ. ಇವುಗಳನ್ನು ಪಕ್ಕಾ ಬೇಟೆ ನಾಯಿ ಎಂತಲೇ ಕರೆಯಲಾಗುತ್ತದೆ. ಬೇಟೆಗೆ ಇಳಿದರೆ ಮಿಸ್ ಆಗುವ ಮಾತೇ ಇಲ್ಲ. ಶರವೇಗದಲ್ಲಿ ಓಡುವ ಮುಧೋಳ ಹೌಂಡ್ ಅಂದರೆ ಎಲ್ಲರಿಗೂ ಅಚ್ಚುಮೆಚ್ಚು. ಸಣಕಲು ದೇಹದ ಉದ್ದನೆಯ ಕಾಲು, ಕೋಲು ಮುಖದ ಮುಧೋಳ ಶ್ವಾನಕ್ಕೆ ಈಗ ಎಲ್ಲರ ಗಮನ ಸೆಳೆದಿದೆ.
ಮುಧೋಳ ಹೌಂಡ್ ಶ್ವಾನಗಳನ್ನು ಸೇನೆಯಲ್ಲಿ ಬಳಕೆ ಬಗ್ಗೆ ಪ್ರಸ್ತಾಪಿಸಿದ್ದು, ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಹಿಂದೆ ರಾಜಮಹಾರಾಜರ ಕಾಲದಲ್ಲೂ ಇದನ್ನು ರಕ್ಷಣಾ ಕಾರ್ಯಕ್ಕೆ ಬಳಕೆ ಮಾಡಲಾಗುತ್ತಿತ್ತು. ಈಗ ಸ್ವತಃ ದೇಶದ ಪ್ರಧಾನಮಂತ್ರಿಗಳ ಶ್ವಾನದ ಗುಣಗಾನ ಮಾಡಿರುವುದು ಶ್ವಾನದ ಬೇಡಿಕೆ ಹೆಚ್ಚಲು ಕಾರಣವಾಗಿದೆ.ಈ ತಳಿಯನ್ನು ಇನ್ನಷ್ಟು ಅಭಿವೃದ್ಧಿ ಪಡಿಸುವ ಮೂಲಕ ದೇಶ-ವಿದೇಶಿಗಳಲ್ಲೂ ನಮ್ಮ ದೇಶಿ ತಳಿಯನ್ನು ಪ್ರಚುರ ಪಡಿಸಬೇಕು ಎಂಬುದು ಸ್ಥಳೀಯರ ಆಶಯ.
ಇನ್ನೂ ಮುಧೋಳ ಹೌಂಡ್ ಕ್ರಿ.ಪೂ 500ರಲ್ಲಿ ಇತ್ತು ಎನ್ನಲಾಗುತ್ತದೆ. ಬಳಿಕ ಮುಧೋಳ ಮಹಾರಾಜ ಮಾಲೋಜಿರಾವ್ ಮುಧೋಳ ಶ್ವಾನವನ್ನು ಹೆಚ್ಚು ಪ್ರಚುರ ಪಡಿಸಿದ್ದರು. ನಂತರ ಶಿವಾಜಿ ಮಹಾರಾಜರು ತಮ್ಮ ಸೇನೆಯಲ್ಲಿ ಮುಧೋಳ ಶ್ವಾನ ಬಳಸಿಕೊಂಡಿದ್ದರಂತೆ. ಹಲಗಲಿ ಬೇಡರ ಜೊತೆ ಸ್ವಾತಂತ್ರ್ಯ ಹೋರಾಟದಲ್ಲಿ ಮುಧೋಳ ಶ್ವಾನ ಭಾಗಿಯಾಗಿತ್ತಂತೆ. ಸದ್ಯ ಮುಧೋಳ ಶ್ವಾನವು ಭಾರತೀಯ ಸೇನೆ, ಸೀಮಾ ಸುರಕ್ಷಾ ಬಲ ದಳ, ಸೆಂಟ್ರಲ್ ಇಂಡಸ್ಟ್ರಿ ಸೆಕ್ಯುರಿಟಿ ಫೋರ್ಸ್, ಸಿಆರ್ಪಿಎಫ್ನಲ್ಲೂ ಸೇವೆ ಸಲ್ಲಿಸುತ್ತಿದೆ.
ತಾಲೂಕಿನ ತಿಮ್ಮಾಪುರದಲ್ಲಿ ಇರುವ ಶ್ವಾನ ಸಂವರ್ಧನ ಕೇಂದ್ರದಲ್ಲಿ ಒಟ್ಟು 40 ಶ್ವಾನಗಳು ಇದ್ದು, ಬೇಡಿಕೆಯೂ ಹೆಚ್ಚಾಗಿದೆ ಎನ್ನಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಕರ್ನಾಟಕ ಪೊಲೀಸ್ ಪೋರ್ಸ್ಗೂ ಈ ದೇಶಿ ಶ್ವಾನ ಕಳಿಸುವ ಯೋಜನೆ ಇದೆ ಅಂತಾರೆ ಕೇಂದ್ರದ ಮುಖ್ಯಸ್ಥ ಮಹೇಶ ಆಕಾಶೆ.