ಬಾಗಲಕೋಟೆ: ಸ್ಥಳೀಯ ಶಾಸಕ ವೀರಣ್ಣ ಚರಂತಿಮಠ ಅವರು ಕಳೆದ ಒಂದು ವರ್ಷದಿಂದ ನನಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆಯುಷ್ ಇಲಾಖೆ ಕಾರ್ಯನಿರ್ವಹಿಸುತ್ತಿರುವ ಸ್ತ್ರೀ ರೋಗ ಅಟೆಂಡರ್ ವಿಜಯಲಕ್ಷ್ಮಿ ಸರೂರ ಆರೋಪಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ನಡೆಸಿ ಮಾತನಾಡಿದ ಅವರು, ನಾನು ಒಳ ಗುತ್ತಿಗೆ ಆಧಾರದ ಮೇಲೆ ಆಯುಷ್ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ನನ್ನನ್ನು ಕೆಲಸದಿಂದ ವಜಾಗೊಳಿಸಬೇಕೆಂದು ಇತ್ತೀಚೆಗೆ ನಡೆದ ಜಿಲ್ಲಾ ಕೆಡಿಪಿ ಸಭೆಯಲ್ಲಿ ನಿರ್ಣಯಿಸಿದ್ದಾರೆ. ನಾನು ಮೊದಲೇ ನೊಂದ ಮಹಿಳೆ ಆಗಿದ್ದು, ಅನಾವ್ಯಶಕವಾಗಿ ನನ್ನ ಮೇಲೆ ಆರೋಪ ಹೊರಸಿ ಸತ್ಯಾಂಶ ಅರಿಯದೇ ಸಭೆಯಲ್ಲಿ ಠರಾವು ಪಾಸ್ ಮಾಡಿದ್ದಾರೆ. ನನ್ನ ವಿಷಯವು ಜಗತ್ತಿಗೆ ತಿಳಿದಿದ್ದು, ಜೀವ ಭಯದಲ್ಲಿ ಓಡಾಡುತ್ತಿದ್ದೇನೆ ಎಂದರು.
ಈಗಾಗಲೇ ಈ ಹಿಂದೆ ನನ್ನ ಮೇಲೆ ಕೊಲೆ ಪ್ರಯತ್ನ ನಡೆದಿದೆ. ನಮ್ಮ ಇಲಾಖೆಯ ಮೇಲಧಿಕಾರಿಗಳು ಹುನಗುಂದಕ್ಕೆ ನನ್ನನ್ನು ವರ್ಗಾವಣೆ ಮಾಡಿದ್ದಾರೆ. ನಾನು ಏನಾದರೂ ತಪ್ಪು ಮಾಡಿದ್ದರೆ ತಿಳಿಸಲಿ. ಯಾವುದೇ ರೀತಿಯಾಗಿ ನನ್ನ ಮೇಲೆ ದೂರುಗಳು ಇಲ್ಲ. ಸಂಕಷ್ಟದಲ್ಲಿರುವ ನನಗೆ ಸಹಾಯಕ್ಕೆ ಬರಬೇಕಾದ ಜನಪ್ರತಿನಿಧಿಗಳೇ ವಜಾಗೊಳಿಸುವ ಕ್ರಮ ಕೈಗೊಳ್ಳುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಮೌಲ್ಯಯುತ ರಾಜಕಾರಣ, ಶಿಸ್ತಿನ ಪಕ್ಷ ಎನ್ನುವ ಬಿಜೆಪಿಯವರು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬೀಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ತಕ್ಷಣ ವರ್ಗಾವಣೆ ರದ್ದು ಪಡಿಸಿ ಮರಳಿ ಬಾಗಲಕೋಟೆಗೆ ವರ್ಗಾವಣೆ ನೀಡಬೇಕು. ಇಲ್ಲವಾದಲ್ಲಿ ನಾಳೆಯಿಂದಲೇ ಶಾಸಕರ ಮನೆ ಮುಂದೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಹೇಳಿದರು.
ಕೆಡಿಪಿ ಸಭೆಯಲ್ಲಿ ನನ್ನನ್ನು ಸೇವೆಯಿಂದ ವಜಾಗೊಳಿಸಲು ಠರಾವು ಮಾಡಿದ್ದು, ನನ್ನ ಜೀವಕ್ಕೆ ಏನಾದರೂ ಆದರೆ, ಅದಕ್ಕೆ ಅಂದಿನ ಸಭೆಯಲ್ಲಿದ್ದ ಸಚಿವರಾದ ಗೋವಿಂದ ಕಾರಜೋಳ, ಉಮೇಶ ಕತ್ತಿ, ಸ್ಥಳೀಯ ಶಾಸಕರೇ ಕಾರಣವೆಂದು ನೇರವಾಗಿ ಆರೋಪ ಮಾಡಿದರು.