ಬಾಗಲಕೋಟೆ : ಹುನಗುಂದ ಮತ ಕ್ಷೇತ್ರದ ಶಾಸಕರಾದ ದೊಡ್ಡನಗೌಡ ಪಾಟೀಲ ಅವರು ಭಾಷಣ ಮಾಡುವ ವೇಳೆ ಕಿಡಿಗೇಡಿಗಳು ಕಲ್ಲು ಎಸೆದಿರುವ ಘಟನೆ ನಡೆದಿದೆ. ಇಲಕಲ್ಲ ತಾಲೂಕಿನ ಗುಡೂರು ಗ್ರಾಮದಲ್ಲಿ ಆಯೋಜಿಸಿದ್ದ ಸಂಗೊಳ್ಳಿ ರಾಯಣ್ಣ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆ ಭಾಷಣ ಮಾಡುವಾಗ ಶಾಸಕರ ಮೇಲೆ ಕಲ್ಲು ಎಸೆಯಲಾಗಿದೆ. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.
ಈ ವೇಳೆ ಗಲಿಬಿಲಿಗೊಂಡ ಶಾಸಕ ದೊಡ್ಡನಗೌಡ ಪಾಟೀಲ ಕೆಲ ಕಾಲ ಭಾಷಣ ನಿಲ್ಲಿಸಿದ್ದಾರೆ. ಬಳಿಕ ಭಾಷಣ ಮುಂದುವರೆಸಿದ ಅವರು ,ಕಲ್ಲು ಎಸೆಯುವುದರಿಂದ ಮತ ಬರಲ್ಲ. ಇಂತಹ ಕೆಲಸ ಮಾಡಿದರೆ ರಾಜಕೀಯವಾಗಿ ಬೆಳೆಯಲ್ಲ. ಒಂದು ಅಲ್ಲ ನೂರು ಕಲ್ಲು ಎಸೆದರೂ ನಾವು ಅಂಜುವುದಿಲ್ಲ, ನಾವು ಗುಂಡಿಗೆ ಇಟ್ಟುಕೊಂಡು ಬಂದಿದ್ದೇವೆ. ಸಂಗೊಳ್ಳಿ ರಾಯಣ್ಣ ವೇದಿಕೆಗೆ ಕಲ್ಲು ಎಸೆದಿರುವವರು ಮನುಷ್ಯರಾಗಿ ಹುಟ್ಟಿಲ್ಲ ಎಂದು ಪರೋಕ್ಷವಾಗಿ ಕಾಂಗ್ರೆಸ್ ಮಾಜಿ ಶಾಸಕರ ವಿರುದ್ದ ವಾಗ್ದಾಳಿ ನಡೆಸಿದರು.