ಬಾಗಲಕೋಟೆ:ವಿಪಕ್ಷ ನಾಯಕ ಸಿದ್ದರಾಮಯ್ಯ ಎಲ್ಲ ಕಡೆ ದ್ರೋಹ ಮಾಡುತ್ತಾ ಬಂದಿದ್ದಾರೆ. ಬಾದಾಮಿಯಲ್ಲಿ ರಾಜಕೀಯ ಪುನರ್‌ಜೀವನ ನೀಡಿದ ಚಿಮ್ಮನಕಟ್ಟಿ ಹಾಗೂ ಎಸ್.ಆರ್ ಪಾಟೀಲ್ ಅವರನ್ನು ಮುಗಿಸಿದ್ದಾರೆ ಎಂದು ಸಾರಿಗೆ ಸಚಿವ ಶ್ರೀರಾಮಲು ಟೀಕಿಸಿದ್ದಾರೆ. ನವನಗರದ ಬಿಜೆಪಿ ಪಕ್ಷದ ಕಚೇರಿಯಲ್ಲಿ ಬಳ್ಳಾರಿಯಲ್ಲಿ ನಡೆಯುವ ಎಸ್ಟಿ ಯುವ ಮೋರ್ಚಾ ರಾಜ್ಯ ಮಟ್ಟದ ಸಮಾವೇಶ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಬಾದಾಮಿಯಲ್ಲಿ ಗಂಟೆಗಟ್ಟಲೆ ಕೆಲಸ ಮಾಡಿ ಮುಖಂಡರು ಸಿದ್ದರಾಮಯ್ಯ ಅವರನ್ನು ಗೆಲ್ಲಿಸಿಕೊಟ್ಟರು. ಈ ಸಲ ಕೋಲಾರಕ್ಕೆ ಹೋಗುತ್ತಿದ್ದಾರೆ. ಕೋಲಾರದಲ್ಲೂ ಅವರು ನಿಲ್ಲೋದಿಲ್ಲ. ಮತ್ತೆ ವರುಣಾಗೆ ಓಡಿ ಹೋಗೋದು. ಆದರೆ ವರುಣಾದಲ್ಲಿ ಯಾರು ನಿಲ್ಲಬೇಕೆಂದು ಬಿಎಸ್ವೈ ನಿರ್ಧಾರ ಮಾಡುತ್ತಾರೆ. ನಾನೆಂದೂ ತಿಂದುಂಡ ಮನೆಗೆ ಜಂತಿ ಎಣಿಸುವ ಕೆಲಸ ಮಾಡಿಲ್ಲ. ಸಿದ್ದರಾಮಯ್ಯ ದೊಡ್ಡ ಮನುಷ್ಯ, ದೇವೇಗೌಡರ ಹೆಸರು ಹೇಳಿಕೊಂಡು ಬಂದು ಬೆನ್ನಿಗೆ ಚೂರಿ ಹಾಕಿದರು. ಪರಮೇಶ್ವರ, ಖರ್ಗೆ ಸೇರಿದಂತೆ ಎಲ್ಲರನ್ನು ಮುಗಿಸುತ್ತಲೇ ಬಂದರು. ಇದನ್ನು ನೋಡಿದರೆ ದೊಡ್ಡ ಪಟ್ಟಿಯೇ ಆಗುತ್ತೆ ಎಂದು ಶ್ರೀರಾಮಲು ಭಾಷಣ ಉದ್ದಕ್ಕೂ ಸಿದ್ದರಾಮಯ್ಯನವರು ವಿರುದ್ದ ವಾಗ್ದಾಳಿ ನಡೆಸಿದರು.