ಬಾಗಲಕೋಟೆ: ಚಂಡಿನಂತೆ ಪುಟಿದು ಮೇಲೆ ಬರುವ ಶಕ್ತಿ ನನಗೆ ಇದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಹೇಳಿದ್ದಾರೆ.
ಬಳ್ಳಾರಿ ಜಿಲ್ಲೆ ವಿಭಜನೆಯಿಂದ ಸಚಿವ ಆನಂದಸಿಂಗ್ ಮೇಲುಗೈ ಸಾಧಿಸಿರುವರೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಬಳ್ಳಾರಿ ವಿಭಜನೆಯಿಂದ ರಾಮುಲು ಮಂಕಾಗಿಲ್ಲ, ರಾಮುಲು ಹಿಂದೆ ಸರಿದಿದ್ದಾರೆ ಅಂತನೂ ಅಲ್ಲ. ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಬಳ್ಳಾರಿ ಜಿಲ್ಲೆಯಲ್ಲಿ ಇವತ್ತು ಆ ಪಕ್ಷವನ್ನು ಒಬ್ಬ ಶ್ರೀರಾಮುಲು ಎನ್ನುವ ವ್ಯಕ್ತಿ ನೆಲಸಮ ಮಾಡಿದ್ದಾನಂದ್ರೆ ಅದು ಬಿಜೆಪಿ ಶಕ್ತಿಯಾಗಿದೆ. ರಾಮುಲು ಅವರನ್ನು ಯಾರೂ ಕುಗ್ಗಿಸಲು ಸಾಧ್ಯವಿಲ್ಲ. ರಾಮುಲು ಕೇವಲ ಒಂದು ತಾಲೂಕು, ಜಿಲ್ಲೆಯ ಲೀಡರ್ ಅಲ್ಲ, ಈ ಶ್ರೀರಾಮುಲು ರಾಜ್ಯ ಮಟ್ಟದ ಲೀಡರ್ ಎಂದರು.
ಪರೋಕ್ಷವಾಗಿ ಆನಂದ್ ಸಿಂಗ್ಗೆ ಸಚಿವ ಶ್ರೀರಾಮುಲು ತಿರುಗೇಟು ಚಂಡು ನೆಲಕ್ಕೆ ಒಗೆದಾಗ ಹೇಗೆ ಪುಟಿಯುತ್ತದೆಯೋ, ಹಾಗೆ ಚೆಂಡಿನಂತೆ ವೇಗವಾಗಿ ಜಿಗಿಯುವ ಶಕ್ತಿಯನ್ನು ದೇವರು ನನಗೆ ಕೊಟ್ಟಿದ್ದಾನೆ. ನೆಲಕ್ಕೆ ಬಿದ್ರು ಕೂಡ ಮೇಲೆ ಎದ್ದು ಬರುವ ಶಕ್ತಿಯನ್ನು ದೇವರು ಮತ್ತು ನಾಡಿನ ಜನತೆ ಕೊಟ್ಟಿದ್ದಾರೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಆನಂದ್ ಸಿಂಗ್ಗೆ ತಿರುಗೇಟು ನೀಡಿದ್ರು.
ಇದೇ ಸಮಯದಲ್ಲಿ ಸಿಎಂ ಬದಲಾವಣೆ ವಿಚಾರವಾಗಿ ಮಾತನಾಡಿ, ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಮುಖ್ಯಮಂತ್ರಿಗಳ ಬದಲಾವಣೆ ಪ್ರಶ್ನೆಯೇ ಇಲ್ಲ. ಸಿಎಂ ಬದಲಾವಣೆಗೆ ಕೆಲ ಶಾಸಕರು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ ಎನ್ನುವ ವಿಚಾರವಾಗಿ ಪ್ರತಿಕ್ರಿಯಿಸಿ, ಅಂಥ ಯಾವುದೇ ಪತ್ರವಿಲ್ಲ, ಮುಖ್ಯಮಂತ್ರಿಯಾಗಿ ಯಡಿಯೂರಪ್ಪನವರೇ ಮುಂದುವರೆಯುತ್ತಾರೆ. ಯಡಿಯೂರಪ್ಪ ಸಿಎಂ ಆದಾಗಿನಿಂದ ನೆರೆ, ಅತಿವೃಷ್ಟಿ, ಕೋವಿಡ್ ಬಂತು. ಅದಾಗ್ಯೂ ಅವರು ಯಾವುದೇ ವಿಘ್ನ ಇಲ್ಲದೇ ಸರ್ಕಾರ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಎಲ್ಲ ಇಲಾಖೆಗಳಲ್ಲೂ ಕೆಲಸಗಳು ಆಗ್ತಿವೆ. ಹೀಗಾಗಿ ಮುಖ್ಯಮಂತ್ರಿಗಳ ಬದಲಾವಣೆಯ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟ ಪಡಿಸಿದರು.
ಓದಿ: ಬಾದಾಮಿಯಲ್ಲಿ ಸಿದ್ದು-ರಾಮುಲು ಮುಖಾಮುಖಿ : ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ
ಇದೇ ಸಮಯದಲ್ಲಿ ಸಿದ್ದರಾಮಯ್ಯನವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿ, ಸಿದ್ದರಾಮಯ್ಯನವರಿಗೆ ಬರೀ ಸಿಎಂ ಖುರ್ಚಿ ಕಾಣುತ್ತಿದೆ. ಹೇಗಾದರೂ ಮಾಡಿ ಆ ಖುರ್ಚಿಗೆ ಬರಬೇಕು ಅಂತ ನೋಡುತ್ತಿದ್ದಾರೆ. ನಮ್ಮ ಇಂಟೆನ್ಶನ್ ಅದಲ್ಲ, ಬಡವ, ರೈತರ ಹಿತದೃಷ್ಟಿಗೆ ಕೆಲಸ ಮಾಡುವುದು. ಒಂದು ಉಪಚುನಾವಣೆ ಗೆದ್ರೆ ಸಾಕು, ಮುಖ್ಯಮಂತ್ರಿ ಆಗಬೇಕು ಅಂತಾರೆ ಸಿದ್ದರಾಮಯ್ಯ. ಆದರೆ ಉಪಚುನಾವಣೆಯಲ್ಲಿ ನಾವೇ ಗೆಲ್ಲುತ್ತಿದ್ದೇವೆ. ಮುಂದಿನ ಉಪಚುನಾವಣೆಯಲ್ಲೂ ನಾವೇ ಗೆಲ್ಲುತ್ತೇವೆ. ಚಾಮುಂಡಿ ಕ್ಷೇತ್ರದ ಜನರ ವಿಶ್ವಾಸ ಕಳೆದುಕೊಂಡು ಇಲ್ಲಿಗೆ ಬಂದಿದ್ದಾರೆ. ಕೆಲವು ಅಂತರದಿಂದ ನನ್ನ ವಿರುದ್ಧ ಗೆದ್ದಿದ್ದಾರೆ ಎಂದರು.