ಬಾಗಲಕೋಟೆ :ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳಲ್ಲಿ ವೃತ್ತಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಸ್ವಯಂ ಉದ್ಯೋಗ ಕೈಗೊಳ್ಳುವಂತೆ ಮಾಡಲು ಜಿಲ್ಲೆಗೊಂದು ವೃತ್ತಿ ಶಿಕ್ಷಣ ಶಾಲೆ ಪ್ರಾರಂಭಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಕೈಮಗ್ಗ, ಜವಳಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಶ್ರೀಮಂತ ಬಾಳಾಸಾಹೇಬ ಪಾಟೀಲ ಹೇಳಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ನಡೆದ ಕೈಮಗ್ಗ ಮತ್ತು ಜವಳಿ, ಅಲ್ಪಸಂಖ್ಯಾತರ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಲ್ಪಸಂಖ್ಯಾತರನ್ನು ಶಿಕ್ಷಣದ ಮೂಲಕವೇ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಮದರಸಾಗಳ ಶಿಕ್ಷಣ ಪದ್ಧತಿಯೊಂದಿಗೆ ಇತರ ನಿಗದಿತ ಪಠ್ಯಕ್ರಮಗಳನ್ನು ವಯಸ್ಸಿಗನುಗುಣವಾಗಿ ಬೋಧಿಸುವುದು ಅಗತ್ಯವಾಗಿದೆ. ಇದಕ್ಕಾಗಿ ಇಲಾಖೆಯು ಕಾರ್ಯಕ್ರಮ ರೂಪಿಸಬೇಕು ಎಂದರು.
ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳಲ್ಲಿ ಎಲ್ಲಾ ರೀತಿಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿದ್ದು, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಉತ್ತಮ ಫಲಿತಾಂಶ ಬರುವಂತೆ ಮಾಡಬೇಕು. ಕರ್ತವ್ಯ ನಿರತ ಶಿಕ್ಷಕರಿಗೆ ಜವಾಬ್ದಾರಿ ವಹಿಸಬೇಕು. ಎಸ್ಎಸ್ಎಲ್ ಸಿ ನಂತರ ಮುಂದಿನ ಶಿಕ್ಷಣ ಮತ್ತು ಉದ್ಯೋಗ ಬಗ್ಗೆ ಮಾಹಿತಿ ಕಲೆ ಹಾಕಲು ಅಧಿಕಾರಿಗಳಿಗೆ ತಿಳಿಸಿದರು. ಇಲಾಖೆಯಡಿ ನಿರ್ಮಿಸಲಾಗುತ್ತಿರುವ ವಸತಿ ಶಾಲೆ, ಕಾಲೇಜುಗಳ ಕಟ್ಟಡ ಗುಣಮಟ್ಟ ಕಾಯ್ದುಕೊಳ್ಳುವಂತೆ ನೋಡಿಕೊಳ್ಳಲು ಸೂಚಿಸಿದರು.
ಬಳಿಕ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಎಮ್.ಎನ್. ಮೇಲಿನಮನಿ ಮಾತನಾಡಿ ಜಿಲ್ಲೆಯಲ್ಲಿ ಒಟ್ಟು 2.49 ಲಕ್ಷ ಅಲ್ಪಸಂಖ್ಯಾತರಿದ್ದಾರೆ. 16 ವಸತಿ ನಿಲಯಗಳಿದ್ದು, ಈ ಪೈಕಿ 14 ಸ್ವಂತ, 2 ಬಾಡಿಗೆ, 1 ಕಟ್ಟಡ ಪ್ರಗತಿ, ಒಂದಕ್ಕೆ ನಿವೇಶನ ಲಭ್ಯವಿರುವುದಾಗಿ ತಿಳಿಸಿದರು.
ಕೋವಿಡ್ ಹಿನ್ನೆಲೆಯಲ್ಲಿ 9 ವಸತಿ ನಿಲಯಗಳನ್ನು ಕ್ವಾರಂಟೈನ್ ಕೇಂದ್ರಗಳಾಗಿ ಪರಿವರ್ತನೆ ಮಾಡಲಾಗಿದೆ. ಕಳೆದ ಸಾಲಿನಲ್ಲಿ 947 ವಿದ್ಯಾರ್ಥಿಗಳು ದಾಖಲಾಗಿರುತ್ತಾರೆ. 7 ವಸತಿ ಶಾಲೆ, 9 ಆಂಗ್ಲ ಮಾಧ್ಯಮ ಶಾಲೆಗಳಿವೆ ಎಂದು ತಿಳಿಸಿದರು.
ನೇಕಾರರ ಅಭಿವೃದ್ಧಿಗೆ ಹೊಸ ಜವಳಿ ನೀತಿ:
ಹೊಸ ಜವಳಿ ನೀತಿ ಯೋಜನೆಯಡಿ ಟೆಕ್ಸಟೈಲ್ ಪಾರ್ಕ ನಿರ್ಮಾಣ ಮಾಡಲಾಗುತ್ತಿದೆ. ಹೆಚ್ಚಾಗಿ ತಮಿಳುನಾಡಿನಲ್ಲಿ ಜವಳಿ ಪಾರ್ಕಗಳು ಕಂಡು ಬರುತ್ತಿದ್ದು, ರಾಜ್ಯದಲ್ಲಿಯೂ ಸಹ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಹೆಚ್ಚಿನ ಉದ್ಯೋಗ ದೊರಕಲಿವೆ ಎಂದರು.
ಕೋವಿಡ್ ಹಿನ್ನಲೆಯಲ್ಲಿ ಸಂಕಷ್ಟಕ್ಕೆ ಒಳಗಾದ ನೇಕಾರರಿಗೆ ಸಮ್ಮಾನ್ ಯೋಜನೆಯಡಿ ವಾರ್ಷಿಕವಾಗಿ 2 ಸಾವಿರ ರೂ. ನೀಡಲಾಗುತ್ತಿದ್ದು, 54 ಸಾವಿರ ಅರ್ಜಿ ಬಂದಿದ್ದು, ಈ ಪೈಕಿ 41 ಸಾವಿರ ಅರ್ಜಿಗಳನ್ನು ಪರಿಶೀಲಿಸಲಾಗಿ ಅದರಲ್ಲಿ 33 ಸಾವಿರ ನೇಕಾರರಿಗೆ 661 ಲಕ್ಷ ರೂ.ಗಳ ಸಹಾಯಧನವನ್ನು ನೇರವಾಗಿ ಅವರ ಖಾತೆಗಳಿಗೆ ಜಮಾ ಮಾಡಲಾಗಿದೆ ಎಂದು ತಿಳಿಸಿದರು.
ವಿದ್ಯುತ್ ಮಗ್ಗಗಳ ನೇಕಾರರನ್ನು ಸಹ ಈ ಯೋಜನೆಯಡಿ ತೆಗೆದುಕೊಳ್ಳಲಾಗಿದ್ದು, ಸರ್ವೆ ಕಾರ್ಯ ಮಾಡಲಾಗಿದೆ. 46 ಸಾವಿರ ಪೈಕಿ 24800 ಫಲಾನುಭವಿಗಳಿಗೆ 490 ಲಕ್ಷ ರೂ.ಗಳ ಸಹಾಯಧನ ಜಮಾ ಮಾಡಲಾಗಿದೆ. ಕೋವಿಡ್‍ನಲ್ಲಿ ವಾರಿಯರ್ಸ್‍ಗಳಾಗಿ ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತೆಯರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ ನೇಕಾರರು ಉತ್ಪಾದಿಸಿದ ಸೀರೆಗಳನ್ನು ಖರೀದಿಸಿ ನೀಡಲು ಮುಖ್ಯಮಂತ್ರಿಗಳ ಜೊತೆ ಚರ್ಚಿಸಲಾಗಿದ್ದು, ಒಪ್ಪಿಗೆ ನೀಡಿದ್ದು, ಅದಕ್ಕಾಗಿ 6 ಲಕ್ಷ ಸೀರೆಗಳನ್ನು ಖರೀದಿಸಲಾಗುತ್ತಿದೆ ಎಂದು ತಿಳಿಸಿದರು.
ಸಭೆಯಲ್ಲಿ ಸಂಸದ ಪಿ.ಸಿ. ಗದ್ದಿಗೌಡರ, ಶಾಸಕ ವೀರಣ್ಣ ಚರಂತಿಮಠ, ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದ ಅಧ್ಯಕ್ಷ ಮುಕ್ತಾರ ಪಠಾಣ, ಅಲ್ಪಸಂಖ್ಯಾತರ ಇಲಾಖೆಯ ನಿರ್ದೇಶಕ ಮಹಬೂಬ ಪಾಷಾ, ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ. ರಾಜೇಂದ್ರ, ಜಿ.ಪಂ ಸಿಇಓ ಟಿ. ಭೂಬಾಲನ, ಸಚಿವರ ಆಪ್ತ ಕಾರ್ಯದರ್ಶಿ ರಾಜಕುಮಾರ ತೋರಗಲ್ಲ, ವಿಶೇಷ ಕರ್ತವ್ಯಾಧಿಕಾರಿ ರಾಜಕುಮಾರ ಟಕಾಳೆ ಸೇರಿದಂತೆ ಇತರರು ಉಪಸ್ಥಿತರಿದ್ದರು.